)
ಬೆಂಗಳೂರು: ಬೀದಿನಾಯಿಗಳಿಂದ ದಾಳಿಗೊಳಗಾಗಯವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚಗೆ ವೃದ್ಧ ವ್ಯಕ್ತಿಯೊಬ್ಬರು ಬೀದಿ ನಾಯಿಗಳ ದಾಳಿಗೆ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇನ್ನು ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.
ಆಗಸ್ಟ್ 9ರ ಮಧ್ಯಾಹ್ನ 3:46ಕ್ಕೆ, ರಾಮಮೂರ್ತಿ ನಗರ ಪ್ರದೇಶದಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದ ಪುಟ್ಟ ಬಾಲಕನನ್ನು ಏಕಾಏಕಿ ಒಂದು ಬೀದಿ ನಾಯಿ ಹಿಂಬಾಲಿಸಿದೆ. ನಂತರದಲ್ಲಿ ನಾಯಿ ಏಕಾಏಕಿ ಬಾಲಕನ ಮೇಲೆ ದಾಳಿ ಮಾಡಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಕಡೆಗೆ ವೇಗವಾಗಿ ಓಡಿ ಬಂದ ಶ್ವಾನ ಆತನ ಮೇಲೆ ದಾಳಿ ಮಾಡಿರುವುದು ತಿಳಿದುಬಂದಿದೆ.
ಇನ್ನು ಏಕಾಏಕಿ ನಾಯಿಯ ದಾಳಿಗೆ ಗಾಬರಿಯಾದ ಬಾಲಕ ನೆಲಕ್ಕೆ ಬಿದ್ದು ಕಿರುಚಾಡಿ, ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ನಾಯಿ ಬಾಲಕನ ಬದಲು ಅವನ ಶೂ ಕಚ್ಚಿ, ತಕ್ಷಣ ಸ್ಥಳದಿಂದ ಓಡಿ ಹೋಗಿದೆ. ಒಂದು ವೇಳೆ ನಾಯಿ ಹೆಚ್ಚು ಹೊತ್ತು ಅಲ್ಲಿಯೇ ಇದ್ದು, ದಾಳಿಯನ್ನು ಮುಂದುವರೆಸಿದ್ದರೆ ಬಾಲಕನಿಗೆ ಜೀವಕ್ಕೆ ಕುತ್ತಾಗುತ್ತಿತ್ತು.. ಈ ಘಟನೆ ನಡೆದ ಕೆಲವು ಕ್ಷಣಗಳ ನಂತರ ಬಾಲಕನ ಪೋಷಕರು ಸ್ಥಳಕ್ಕೆ ಬಂದು ಅವನನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕನ ಅದೃಷ್ಟ.. ನಾಯಿಯು ಯಾವುದೇ ರೀತಿಯ ಅಪಾಯಕಾರಿ ಹಾನಿ ಮಾಡದೇ ಮರಳಿದೆ. ಇಲ್ಲವಾದರೆ ದೊಡ್ಡ ಗಂಡಾಂತರವೇ ಎದುರಾಗುತ್ತಿತ್ತು. ಇದು ಕೇವಲ ಒಂದು ಬೀದಿಯ ಸಮಸ್ಯೆಯಲ್ಲ. ಈ ರೀತಿಯ ಅಪಾಯಕಾರಿ ದಾಳಿಗಳು ಬೆಂಗಳೂರಿನ ಹಲವು ಕಡೆಗಳಲ್ಲಿ ಸಂಭವಿಸಿವೆ. ಸದ್ಯಕ್ಕೆ ಈ ಘಟನೆ ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.