)
Karnataka rain news: ಮುಂಗಾರು ಆರಂಭಕ್ಕೂ ಮುನ್ನ ಕರ್ನಾಟಕದ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿತ್ತು. ಅದರಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮರಗಳು ಧರೆಗುರುಳಿವೆ.
ಕರ್ನಾಟಕದ 27 ಜಿಲ್ಲೆಗಳಲ್ಲಿ ಗುರುವಾರದವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಕೆಲ ಭಾಗಗಲ್ಲಿ ಯಲ್ಲೋ ಅಲರ್ಟ್ ನೀಡಿದೆ.
ಮೇ 19 ರಿಂದ 22 ರ ವರೆಗೆ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ. ಮೇ 23 - 24 ಒಣ ಹವಾಮಾನ ಇರಲಿದೆ. ಕರ್ನಾಟಕಕ್ಕೆ ಜೂನ್ 1ಕ್ಕೆ ಮುಂಗಾರು ಮಳೆ ಎಂಟ್ರಿ ಕೊಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೇ 19 ರಂದು ಉತ್ತರ ಕರ್ನಾಟಕದಲ್ಲಿ ಮಧ್ಯಮ ಮಳೆ ಮತ್ತು 40-50 ಕಿ.ಮೀ ಗಾಳಿ ಬೀಸುವ ಸಾಧ್ಯತೆ. ಮೇ 20 - 22ರ ನಡುವೆ 30 - 40 ಕಿ.ಮೀ ವೇಗದ ಗಾಳಿ ಸಹಿತ ಲಘು ಮಳೆ ಆಗಲಿದೆ. ಮೇ 23 - 24ರಂದು ಉತ್ತರ ಕರ್ನಾಟಕದಲ್ಲಿ ಒಣ ಹವೆ ಇರಲಿದೆ. ಮುಂದಿನ 5 ದಿನ ಉತ್ತರ ಕರ್ನಾಟಕದ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾಣ ಇಲಾಖೆ ಹೇಳಿದೆ.
ಕಾಸರಗೋಡು ಸೇರಿ ಕರಾವಳಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಣ್ಣ ಹನಿ ಮಳೆ ಸುರಿಯಲಿದೆ. ಮಧ್ಯಾಹ್ನ ನಂತರ, ಸಂಜೆ ಮತ್ತು ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಆಗಬಹುದು. ಮೇ 20ರಿಂದ ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದ ಮಳೆ ಮುಂದುವರಿಯಲಿದ್ದು ಮೇ 26ರಿಂದ ಮಳೆ ಹೆಚ್ಚಾಗುವ ಲಕ್ಷಣಗಳಿವೆ ಎಂದು ಹೇಳಿದೆ.
ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ಗುಡುಗು ಸಹಿತ ಮಳೆ ಬೀಳಲಿದೆ. ಮೇ 20 ರಿಂದ ಮಳೆ ಪ್ರಮಾಣ ಕಡಿಮೆ ಆಗಲಿದೆ. ಮೇ 26 ರಿಂದ ಮತ್ತೆ ಮಳೆ ಹೆಚ್ಚಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರದಲ್ಲಿ ಮೇ 18 - 22ರ ನಡುವೆ ಮಧ್ಯಮ ಮಳೆ ಮತ್ತು ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ. ಮೇ 23 - 24 ಒಣ ಹವೆ ಇರಲಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯಪುರ, ಕಲಬುರ್ಗಿ, ಬಳ್ಳಾರಿ, ರಾಯಚೂರು, ಯಾದಗಿರ್, ಬೀದರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ ಬೀಳಲಿದೆ. ಮೇ 20ರಿಂದ ಮಳೆ ವ್ಯಾಪ್ತಿ ಮತ್ತು ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಗುಡುಗು ಸಹಿತ ಮಳೆ ಬೀಳಲಿದೆ.
ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರ್ದಲ್ಲಿ ಮೇ 20 ರಿಂದ ದಕ್ಷಿಣ ಒಳನಾಡಿನಲ್ಲೂ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದೆ.
ಮೇ 19 ರಿಂದ ಮೇ 22 ರ ನಡುವೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಇರಲಿದೆ. ಮೇ 23 - 24 ಸ್ವಲ್ಪ ಒಣ ಹವಾಮಾನ ಮತ್ತು ಮೇ 26ರಿಂದ ಮುಂಗಾರು ರೀತಿಯ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.