)
Veerendra Pappi: ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದರು..
ಸಿಕ್ಕಿಂ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಆನ್ಲೈನ್ ಗೇಮಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ವೀರೆಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಕೊನೆಗೂ ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೆಳಗ್ಗೆ ಸಿಕ್ಕಿಂನಿಂದ ವಿಶೇಷ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರೆಂದ್ರ ಪಪ್ಪಿಯನ್ನು ಕರೆತರಲಾಯಿತು.
ವಿಮಾನ ನಿಲ್ದಾಣದಲ್ಲಿ ಈಗಾಗಲೇ ಸಿದ್ಧರಾಗಿದ್ದ ಇಡಿ ಅಧಿಕಾರಿಗಳ ತಂಡ, ಪಪ್ಪಿಯನ್ನು ತಮ್ಮ ವಶಕ್ಕೆ ಪಡೆಯಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಾಧ್ಯಮಗಳ ಕಣ್ಣುತಪ್ಪಿಸಿ, ಅತ್ಯಂತ ರಹಸ್ಯವಾಗಿ ಅಧಿಕಾರಿಗಳು ಪಪ್ಪಿಯನ್ನು ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಬೆಂಗಳೂರಿನತ್ತ ಹೊರಟರು.