)
ಚಾಮರಾಜನಗರ: ಇಂದು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಯಿತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಎಡಿಸಿ ಜವರೇಗೌಡ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು.
ಮೈದಾನದಲ್ಲಿನ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸುವ ಮೂಲಕ ಪ್ರಾಣತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸಲಾಯಿತು. ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಸಂಘ, ಸಂಸ್ಥೆ ಮುಖಂಡರು, ರೈತ ಮುಖಂಡರು ಪುಷ್ಪ ನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.
ಬಳಿಕ ಕೆಲಸದ ವೇಳೆ ಹುತಾತ್ಮರಾದ ಪೊಲೀಸರನ್ನು ನೆನಪು ಮಾಡಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತಿದ್ದು ನಾಡಿನಲ್ಲಿ ಕಷ್ಟದಲ್ಲಿ ಇರುವವರನ್ನು ಕಾಪಾಡುವವರು ಪೊಲೀಸರಾಗಿದ್ದಾರೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಹೇಳಿದರು.
ಚಾಮರಾಜನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮ ದಿನದಲ್ಲಿ ಅವರು ಮಾತನಾಡಿ, ಸಾರ್ವಜನಿಕರ ರಕ್ಷಣೆಗಾಗಿ ಪೊಲೀಸರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಸೈನಿಕರು ಗಡಿಯಲ್ಲಿ, ಪೊಲೀಸರು ದೇಶದ ಒಳಗೆ ಕಾರ್ಯಮಾಡುತ್ತಾರೆ. ಇವರಿಂದ ಸಮಾಜವು ಶಾಂತಿ ಸುವ್ಯವಸ್ಥೆಯಿಂದ ಇದ್ದು ಇದರ ಬಗ್ಗೆ ಪ್ರತಿಯೊಬ್ಬರು ಅರಿವಿರಬೇಕು. ಜೊತೆಗೆ , ಪೊಲೀಸರ ಕರ್ತವ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವ್ಥೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ವವಾದದು. ನರಹಂತಕ ವೀರಪ್ಪನ್ ನನ್ನು ಹಿಡಿಯಲು ಎರಡು ರಾಜ್ಯಗಳು ಕೋಟ್ಯಂತರ ರೂ. ಖರ್ಚುಮಾಡಿವೆ.ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮೃತಪಟ್ಟಿದ್ದಾರೆ. ಹರಿಕೃಷ್ಣ, ಶಕೀಲ್ ಅಹಮದ್ ಸೇರಿದಂತೆ ವೀರಪ್ಪನನ್ನು ಹಿಡಿಯಲು 184 ಜನ ಮೃತಪಟ್ಟಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಎಡಿಸಿ ಜವರೇಗೌಡ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ನೂತನವಾಗಿ ಈ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಲಾಗಿದ್ದು 27 ಅಡಿ ಎತ್ತರವಿದೆ. ರಾಜ್ಯದಲ್ಲೇ ಅತಿ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕ ಎನಿಸಿಕೊಂಡಿದೆ.