)
ಬೆಂಗಳೂರಿನ ಆರ್.ವಿ ಪಿಯು ಲರ್ನಿಂಗ್ ಹಬ್ನಲ್ಲಿ ಕನ್ನಡ ಶಿಕ್ಷಕ ರೂಪೇಶ್ ಅವರ ಸುತ್ತಲಿನ ವಿವಾದ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಮಾತನಾಡಿದ್ದಕ್ಕೆ ರೂಪೇಶ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದ ಆರ್.ವಿ ಕಾಲೇಜು, ಮಾಧ್ಯಮಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾದ ಬಳಿಕ, ಅವರನ್ನು ಮರುನೇಮಕ ಮಾಡಿತ್ತು. ಆದರೆ, ಕೆಲವೇ ದಿನಗಳಲ್ಲಿ ಸಂಸ್ಥೆಯು ರೂಪೇಶ್ ಅವರನ್ನು ಮತ್ತೆ ಕೆಲಸದಿಂದ ತೆಗೆದುಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಈ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡದಂತೆ ರೂಪೇಶ್ ಅವರಿಗೆ ಸಂಸ್ಥೆ ಸೂಚನೆ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಪೋಸ್ಟ್ ಮಾಡದಂತೆಯೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ರೂಪೇಶ್ ಅವರು, ಮರುನೇಮಕದ ಬಳಿಕ ನಾಲ್ಕು ದಿನಗಳ ಕಾಲ ಯಾವುದೇ ಕೆಲಸ ನೀಡದೆ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇದಾದ ಬಳಿಕ, ಸಂಸ್ಥೆಯು ರೂಪೇಶ್ ಅವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವುದಾಗಿ ತಿಳಿಸಿತ್ತು. ಆದರೆ, ಆನಂತರ ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಗಿದೆ ಎಂದು ರೂಪೇಶ್ ಹೇಳಿಕೊಂಡಿದ್ದಾರೆ.ಈ ಘಟನೆಯು ಕನ್ನಡ ಭಾಷೆಯ ಬಗ್ಗೆ ಸಂಸ್ಥೆಯ ವರ್ತನೆಯನ್ನು ಪ್ರಶ್ನಿಸುವಂತೆ ಮಾಡಿದೆ. ಕನ್ನಡ ಶಿಕ್ಷಕನೊಬ್ಬನಿಗೆ ಭಾಷೆಯ ಬಳಕೆಯೇ ವಜಾಗೆ ಕಾರಣವಾಗಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರೂಪೇಶ್ ಅವರ ಮರುನೇಮಕವು ಕೇವಲ ಮಾಧ್ಯಮದ ಒತ್ತಡದಿಂದ ಉಂಟಾದ ತಂತ್ರವಾಗಿತ್ತೇ ಎಂಬ ಅನುಮಾನಗಳು ಕೂಡ ಜನರಲ್ಲಿ ಮೂಡಿವೆ.
ಈ ಬಗ್ಗೆ ಆರ್.ವಿ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ರೂಪೇಶ್ ಅವರಿಗೆ ನೀಡಲಾದ ಸೂಚನೆಗಳು ಮತ್ತು ಕೆಲಸದಿಂದ ತೆಗೆದುಹಾಕಿರುವ ಕ್ರಮವು ಕಾನೂನಿನ ಚೌಕಟ್ಟಿನಲ್ಲಿ ಸರಿಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಪ್ರಕರಣವು ಕನ್ನಡ ಭಾಷೆಯ ಗೌರವ ಮತ್ತು ಶಿಕ್ಷಕರ ಹಕ್ಕುಗಳ ಬಗ್ಗೆ ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.