)
ರಾಜ್ಯ ಸರಕಾರ ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಜಿಬಿಎ ಆಡಳಿತ ಶುರುವಾಗಿದೆ. ಈ ಮೂಲಕ 18 ವರ್ಷಗಳ ಬಳಿಕ ಬಿಬಿಎಂಪಿಯ ಯುಗ ಅಂತ್ಯಗೊಂಡಿದೆ. ಇದರ ನಡುವೆ ಯಾವ ಪಾಲಿಕೆಗೆ ಯಾವ ವಾರ್ಡ್ ಗಳು ಬಂದಿವೆ ಅನ್ನೋ ಗೊಂದಲ ಕೂಡ ಜನರಲ್ಲಿ ಮೂಡಿದೆ. ಹೀಗಾಗಿ ಐದು ಪಾಲಿಕೆಗಳ ವಾರ್ಡ್ ವಿಂಗಣೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಮುಖ್ಯಮಂತ್ರಿ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲೇ 5 ನಗರ ಪಾಲಿಕೆಗಳು ಕಾರ್ಯ ನಿರ್ವಹಣೆ ಶುರುವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳ ಹೆಸರು ಬದಲಾಗಿವೆ. 2007ರಲ್ಲಿ ನಗರಸಭೆ, ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರ್ಪಡೆ ಮಾಡಿ ಬಿಬಿಎಂಪಿ ರಚಿಸಲಾಗಿತ್ತು. ಆದ್ರೀಗ ಜಿಬಿಎ ಹಾಗೂ ನಗರ ಪಾಲಿಕೆಗಳ ಸ್ಥಾಪನೆಯಿಂದಾಗಿ ಬಿಬಿಎಂಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಹಾಲಿ 198 ವಾರ್ಡ್ಗಳ ವ್ಯಾಪ್ತಿಯಲ್ಲಿಯೇ 5 ನಗರ ಪಾಲಿಕೆಗಳನ್ನು ಸ್ಥಾಪಿಸಿರೋ ಸರ್ಕಾರ, ಪ್ರತೀ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್ಗಳು ಮೀರದಂತೆ ವಾರ್ಡ್ಗಳನ್ನು ಮರುವಿಂಗಡಣೆ ಮಾಡಲು ವಾರ್ಡ್ಗಳ ಪುನರ್ ವಿಂಗಡಣಾ ಆಯೋಗವನ್ನೂ ರಚಿಸಲಾಗಿದೆ. ಹೀಗಿರುವಾಗ ವಾರ್ಡ್ ಗಳು ಯಾವ ಯಾವ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿವೆ ಅನ್ನೋ ಗೊಂದಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೆರೆ ಎಳೆದಿದ್ದಾರೆ.
ಜಿಬಿಎ ಮತ್ತು ನಗರ ಪಾಲಿಕೆ ಕಚೇರಿ ವಿಳಾಸ:
ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಅನೆಕ್ಸ್ 1 ಮತ್ತು 2 ಕಟ್ಟಡ
(ಪಾಲಿಕೆ ಕೇಂದ್ರ ಕಚೇರಿ ಆವರಣ)
ಹಡ್ಸನ್ ವೃತ್ತ
ಬೆಂಗಳೂರು ಪೂರ್ವ ನಗರ ಪಾಲಿಕೆ: ಮಹದೇವಪುರ ವಲಯ ಆಯುಕ್ತರ ಕಚೇರಿ, ಆರ್ಎಚ್ಬಿ ಕಾಲೊನಿ, ಫೀನಿಕ್ಸ್ ಮಾಲ್ ಎದುರು, ವೈಟ್ಫೀಲ್ಡ್ ಮುಖ್ಯರಸ್ತೆ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ರಾಜರಾಜೇಶ್ವರಿ ನಗರ ವಲಯ ಆಯುಕ್ತರ ಕಚೇರಿ, ಆರ್ಆರ್ ನಗರ ಐಡಿಯಲ್ ಹೋಮ್ಸ್ ಬಡಾವಣೆ, 18ನೇ ಅಡ್ಡರಸ್ತೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ: ಪೂರ್ವ ವಲಯ ಆಯುಕ್ತರ ಕಚೇರಿ, ಎಂ.ಜಿ.ರಸ್ತೆ, ಪಿಯುಬಿ ಕಟ್ಟಡದ 10ನೇ ಮಹಡಿ
ಬೆಂಗಳೂರು ದಕ್ಷಿಣ ನಗರ ಪಾಲಿಕೆ: ದಕ್ಷಿಣ ವಲಯ ಆಯುಕ್ತರ ಕಚೇರಿ, ಜಯನಗರ 2ನೇ ಹಂತ, 9ನೇ ಮುಖ್ಯರಸ್ತೆ
ಬೆಂಗಳೂರು ಉತ್ತರ ನಗರ ಪಾಲಿಕೆ: ಯಲಹಂಕ ವಲಯ ಆಯುಕ್ತರ ಕಚೇರಿ, ಬ್ಯಾಟರಾಯನಪುರ, ಅಮೃತಹಳ್ಳಿ ಮುಖ್ಯರಸ್ತೆ.
2007ರಲ್ಲಿ ಆರಂಭ ಆದ ಬಿಬಿಎಂಪಿ ಜೀವ ಕಳೆದುಕೊಳ್ಳೋ ಮೂಲಕ ಜಿಬಿಎಗೆ ಮರು ಜೀವ ತುಂಬಿದೆ. ಜೊತೆಗೆ ವಾರ್ಡ್ ವಿಂಗಡಣೆ ಮಾಡಿ ಜನರಲ್ಲಿರೋ ಗೊಂದಲಕ್ಕೂ ಬ್ರೇಕ್ ಹಾಕುವ ಕೆಲಸ ಡಿ.ಕೆ ಶಿವಕುಮಾರ್ ಮಾಡಿದ್ದಾರೆ. ಇದಕ್ಕಂತಲೇ ಯಾವ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ವಾರ್ಡ್ ಸೇರಿಕೊಂಡಿದೆ ಎನ್ನುವ ಪಟ್ಟಿ ಬಿಡುಗಡೆ ಮಾಡಿದ್ದು, 198 ವಾರ್ಡ್ ಗಳ ಪೈಕಿ ನೀವಿರೋ ವಾರ್ಡ್ ಹಾಗೂ ಯಾವ ಪಾಲಿಕೆ ಎಂದು ತಿಳಿಯಲು ವೆಬ್ ಸೈಟ್ ಲಿಂಕ್ ಸೌಲಭ್ಯ ಒದಗಿಸಲಾಗಿದೆ.
ವರದಿ: ಮಂಜುನಾಥ್ ಹೊಸಹಳ್ಳಿ, ಜೀ ಕನ್ನಡ ನ್ಯೂಸ್