ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ್ದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರು, ಮೋಜು ಮಸ್ತಿಗೆ ರೆಸಾರ್ಟ್ಗೆ ಹೋಗಬೇಕಿಲ್ಲ. ಜೈಲಿನಲ್ಲಿಯೇ ಎಲ್ಲ ವ್ಯವಸ್ಥೆ ಆಗ್ತಿದೆ. ರಾಜ್ಯ ಸರ್ಕಾರದ ಬೆಂಬಲದಿಂದಲೇ ಇದೆಲ್ಲ ಆಗ್ತಿದೆ. ಕೋರ್ಟ್ ಎಚ್ಚರಿಸಿದ್ರೂ ಈ ಸರ್ಕಾರಕ್ಕೆ ನಾಚಿಕೆ ಇಲ್ಲ. ಇಸ್ಲಾಮಿಕ್ ರಾಡಿಕಲ್ಸ್ ಗೆ ಸರ್ಕಾರ ಸಪೋರ್ಟ್ ಮಾಡ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ. ಸರ್ಕಾರದ ನಡೆಯನ್ನ ಖಂಡಿಸಿ ಇಂದು ಬಿಜೆಪಿ ಸಿಎಂ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಯತ್ನ ಮಾಡಿದೆ.
ವಿರೋಧ ಪಕ್ಷ ಬಿಜೆಪಿ ನಾಯಕರು ಇಂದು ಬೀದಿಗಿಳಿದು ಹೋರಾಟ ಮಾಡಿದ್ದು, ಜೈಲಿನಲ್ಲಿ ಖೈದಿಗಳಿಗೆ ನೀಡುತ್ತಿರುವ ರಾಜಾತಿಥ್ಯ ನಾಚಿಕೆಗೇಡಿನ ಸಂಗತಿ. ಗಾಂಜಾ, ಬಿರಿಯಾನಿ, ಸಿಗರೇಟ್, ಮದ್ಯ ಎಲ್ಲಾ ಸಿಗುತ್ತಿದೆ. ಒಳಗೆ ಮೊಬೈಲ್ ನೀಡಿ, ಬಿಸ್ನೆಸ್ ಮ್ಯಾನ್ ಗಳಿಗೆ ಬ್ಲಾಕ್ ಮೇಲ್ ಮಾಡ್ತಾ ಇದ್ದಾರೆ. ಅವರ ಮೂಲಕ ಹಣ ಪಡೆಯುತ್ತಿದ್ದಾರೆ. ಜೈಲಿನೊಳಗೆ ಹೋದ್ರೆ ರಾಜಾತಿಥ್ಯ ಫ್ರೀ ಎಂದು ಆರೋಪಿಸಿದ್ದಾರೆ.
"ಇದು ಒಂದು ಗ್ಯಾರಂಟಿ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ಮುಳುಗಿದೆ. ಈಗ ಜೈಲಿನೊಳಗೂ ಇದರ ದರ್ಶನ ಆಗ್ತಿದೆ. ಭಯೋತ್ಪಾದಕರಿಗೆ ಇಷ್ಟೊಂದು ಬೆಂಬಲ ನೀಡಿ ಅಪರಾಧ ಕೃತ್ಯಕ್ಕೆ ಬೆಂಬಲ ನೀಡ್ತಿದೆ. ಏನು ಗೊತ್ತಿಲ್ಲ ಎನ್ನುವ ಸರ್ಕಾರ, ಅಧಿಕಾರಿಗಳನ್ನ ಗುಲಾಮರ ರೀತಿ ನಡೆಸಿಕೊಳ್ತಿದೆ. ಗುಪ್ತಚರ ಇಲಾಖೆ ಏನು ಮಾಡ್ತಿದೆ" ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಜಮಾವಣೆಯಾದ ಬಿಜೆಪಿ ನಾಯಕರು, ಅಲ್ಲಿಯೇ ಹೊಟೆಲ್ ನಲ್ಲಿ ಉಪಹಾರ ಸೇವಿಸಿ, ಟೀ ಕುಡಿದು ರಸ್ತೆಗಿಳಿದಾಗ ಪೊಲೀಸರ ದಂಡು ಎದುರಾಗಿತ್ತು. ಬ್ಯಾರಿಕೇಡ್ ಹಾಕಿ ನಿಂತಿದ್ದ ಆರಕ್ಷಕರು, ಸಿಎಂ ಮನೆಗೆ ಹೋಗುವ ಕುಮಾರಕೃಪ ರಸ್ತೆಯನ್ನ ಬಂದ್ ಮಾಡಿತ್ತು. ಮಾಧ್ಯಮದ ಮುಂದೆ ತಮ್ಮ ಆಕ್ರೋಶ ಹೊರಹಾಕಿದ ಬಿಜೆಪಿ ನಾಯಕರು, ಬ್ಯಾರಿಕೇಡ್ ದಾಟಿ ಸಿಎಂ ಮನೆಯತ್ತ ಹೋಗುವ ಸಾಹಸ ಮಾಡಿದರು. ಆದರೆ ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸ್ ಪಡೆ, ಎಲ್ಲರನ್ನ ಹೊತ್ತೊಯ್ದು ಬಸ್ ನಲ್ಲಿ ತುಂಬಿದರು. ಬಳಿಕ ಬಿಡುಗಡೆ ಪ್ರಕ್ರಿಯೆ ಮುಗಿಸಿ ಕಳುಹಿಸಿಕೊಟ್ಟರು.
ವಿಪಕ್ಷ ಬಿಜೆಪಿಯ ಎಲ್ಲ ನಾಯಕರು ಜಮಾಯಿಸಿದ್ದ ಪ್ರತಿಭಟನೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ ಎಂದು ನಂಬಲಾಗಿತ್ತು. ಆದರರ ಅಧ್ಯಕ್ಷ, ವಿಪಕ್ಷ ನಾಯಕರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು, ಮುಖಂಡರು ಪ್ರತಿಭಟನೆಯಲ್ಲಿ ಮುಂದೆ ನಿಂತಿದ್ದರು. ಆದರೆ ಅವರ ಹಿಂಬದಿಗೆ ಸೇರಬೇಕಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮಾತ್ರ ಇರಲಿಲ್ಲ. ನೂರಾರು ಸಂಖ್ಯೆಯೂ ಅಲ್ಲಿರಲಿಲ್ಲ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ, ಪೊಲೀಸರಿಗೆ ಹೈರಾಣಾಗುವಂತೆ ಮಾಡಬೇಕಿದ್ದ ಪ್ರತಿಭಟನೆ, ಆರಂಭವಾಗುತ್ತಿದ್ದಂತೆ ಮುಗಿದುಹೋಗಿತ್ತು. ಅದೇನೇ ಇದ್ದರು, ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸವನ್ನ ವಿಪಕ್ಷ ಬಿಜೆಪಿ ಮಾಡಿದೆ. ಸಿಎಂ, ಗೃಹ ಸಚಿವರ ರಾಜೀನಾಮೆಗೂ ಆಗ್ರಹಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಈ ಅಕ್ರಮವನ್ನ ಖಂಡಿಸುವ ಕೆಲಸ ಮಾಡಿದೆ. ಸರ್ಕಾರ ಮುಂದೇನು ಮಾಡುತ್ತೆ ಎಂದು ಕಾದನೋಡಬೇಕಷ್ಟೆ.









