)
Chamarajpet: ಚಾಮರಾಜಪೇಟೆಯ ಉಮಾ ಥಿಯೇಟರ್ ಬಳಿ ನಿನ್ನೆ ಸಂಜೆ 6.50ರ ಸುಮಾರಿಗೆ ಸಂಭವಿಸಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತದಲ್ಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. KA 51 AK 2800 ಸಂಖ್ಯೆಯ ಡಿಪೋ ನಂ.13ರ EV ಬಸ್, ಮೆಜೆಸ್ಟಿಕ್ ನಿಂದ ಕಾಮಾಕ್ಯ ಕಡೆಗೆ ಚಲಿಸುತ್ತಿದ್ದ ವೇಳೆ, ದ್ವಿಚಕ್ರ ವಾಹನದಲ್ಲಿ ಮಗುವಿನೊಂದಿಗೆ ಸಾಗುತ್ತಿದ್ದ ಮಹಿಳೆ ಎಡದಿಂದ ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಮಗು ಬಸ್ನ ಹಿಂಭಾಗದ ಎಡ ಚಕ್ರಕ್ಕೆ ಜಾರಿ ಬಿದ್ದು ಅಪಘಾತ ಸಂಭವಿಸಿದೆ.
ಈ ಅಪಘಾತದ ನಂತರ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಇನ್ನೂ ಮುಂದುವರಿದಿದೆ. ವೈದ್ಯರು ಮಗುವಿನ ಸ್ಥಿತಿಯನ್ನು ಗಂಭೀರ ಎಂದು ತಿಳಿಸಿದ್ದಾರೆ. ಈ ದುರಂತದಿಂದ ಆಘಾತಕ್ಕೆ ಒಳಗಾದ ಮಗುವಿನ ಕುಟುಂಬ ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದು, "ಘಟನೆ ನಡೆದು 16 ಗಂಟೆ ಕಳೆದರೂ ಯಾವುದೇ ಬಿಎಂಟಿಸಿ ಅಧಿಕಾರಿ ಅಥವಾ ರಾಜಕೀಯ ನಾಯಕರು ಭೇಟಿಗೆ ಬಂದಿಲ್ಲ" ಎಂಬ ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ಸಂಬಂಧಿಸಿದವರು ಹೇಳಿದ್ದಾರೆ, "ಬಸ್ ಚಾಲಕರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ. ಮಗುಗೆ ಈಗ ಆಪರೇಷನ್ ಆಗಿದೆ, ಆಸ್ಪತ್ರೆ ಖರ್ಚುಗಳನ್ನು ಯಾರು ಭರಿಸಬೇಕು? ಇನ್ನು ಮೂರು ತಿಂಗಳು ಸ್ಕೂಲು ಹೋಗೋಕೆ ಆಗಲ್ಲ. ಇಂತಹ ಬೇಜವಬ್ದಾರಿ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು. ಜನಪ್ರತಿನಿಧಿಗಳು ವೋಟ್ ಬೇಕಾಗಿದ್ರೆ ಮಾತ್ರ ಬರುತ್ತಾರೆ ಎಂಬ ತರಹದ ಆಕ್ರೋಶಗಳು ಕೂಡ ಕೇಳಿಬಂದಿವೆ.
ಈ ಘಟನೆ ಬಿಎಂಟಿಸಿ ಸಿಬ್ಬಂದಿಗಳ ಜವಾಬ್ದಾರಿಯ ಕೊರತೆ, ಸಾರ್ವಜನಿಕರ ಭದ್ರತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಇಂತಹ ದುರ್ಘಟನೆಗಳ ಪುನರಾವೃತ್ತಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅಗತ್ಯವಿದೆ.