Social and Educational Survey Lates Update: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯು ಶೇಕಡ 98.21 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.
ಹಿಂದುಳಿದ ವರ್ಗಗಳ ಆಯೋಗವು ಮಂಗಳವಾರ ಪ್ರಕಟಿಸಿರುವ ಪ್ರಗತಿ ಸಾಧನೆ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆಯು ಶೇ.98.21 ಪ್ರಗತಿ ಸಾಧಿಸುವ ಮೂಲಕ ನಂ-1 ಸ್ಥಾನ ಪಡೆದುಕೊಂಡಿದೆ.
ಸೆ. 22ರಿಂದ ಅ.7 ವರೆಗಿನ ಸಮೀಕ್ಷೆಯಲ್ಲಿ ಚಾಮರಾಜನಗರ ತಾಲೂಕು ಶೇ. 99.15, ಗುಂಡ್ಲುಪೇಟೆ ತಾಲೂಕು ಶೇ.97.41, ಕೊಳ್ಳೇಗಾಲ ತಾಲೂಕು ಶೇ. 94.66, ಯಳಂದೂರು ಹಾಗೂ ಹನೂರು ತಾಲೂಕಿನಲ್ಲಿ ಶೇ. 100ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು ಒಟ್ಟಾರೆ ಚಾಮರಾಜನಗರ ಜಿಲ್ಲೆಯು ಶೇ. 98.21ರಷ್ಟು ಪ್ರಗತಿ ಸಾಧಿಸಿದೆ.
ಇದನ್ನೂ ಓದಿ- ಮನೆ ಮನೆ ಸಮೀಕ್ಷೆ: ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ
ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷಾ ಕಾರ್ಯವನ್ನು ಅನುಷ್ಟಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾವನಾಗ್ ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಪ್ರತಿದಿನ ವಿಡಿಯೋ ಸಂವಾದ ನಡೆಸಿ ಗಣತಿದಾರರಿಗೆ ಗುರಿಯನ್ನು ನಿಗದಿಪಡಿಸಿದ್ದರಿಂದ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಗಣತಿದಾರರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ್ದರಿಂದ ಸಮೀಕ್ಷೆ ಪ್ರಗತಿ ಸಾಧಿಸಿದೆ.
ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಭಾಗವು ಅರಣ್ಯ ಪ್ರದೇಶದಿಂದ ಕೂಡಿದ್ದು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಗ್ರಾಮ/ಹಾಡಿಗಳಲ್ಲಿ ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲದಿರುವುದನ್ನು ಜಿಲ್ಲಾಡಳಿತ ಪರಿಗಣಿಸಿ ನೆಟ್ ವರ್ಕ್ ದೊರಕುವ ಪ್ರದೇಶಗಳಲ್ಲಿ ಕ್ಯಾಂಪ್‍ಗಳನ್ನು ಸ್ಥಾಪಿಸಿ ವಿವಿಧ ಇಲಾಖೆಯ ಸರ್ಕಾರಿ ವಾಹನಗಳಲ್ಲಿ ಗ್ರಾಮಸ್ಥರನ್ನು ಕ್ಯಾಂಪ್‍ಗಳಿಗೆ ಕರೆದುಕೊಂಡು ಬಂದು ಸಮೀಕ್ಷೆ ನಡೆಸಲಾಗಿದೆ. ಯಾವುದೇ ಮನೆಯು ಸಮೀಕ್ಷೆಯಿಂದ ಬಿಟ್ಟು ಹೋಗದಂತೆ ನಡೆಸಿ ಪರಿಶೀಲಿಸಲಾಗಿದೆ ಎಂದು ಡಿಸಿ ಶಿಲ್ಪಾನಾಗ್ ಪ್ರಕಟನೆ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಕಾರ್ಮಿಕ ಸಚಿವರೇ ಗಮನಿಸಿ! ಯುವಕರಿಗೆ ಅನ್ಯಾಯ, ಕನಿಷ್ಠ ವೇತನವೂ ಇಲ್ಲ, ಭರವಸೆ ನೀಡಿದ್ದ ಉದ್ಯೋಗವೂ ಇಲ್ಲ!
ಸಮೀಕ್ಷೆಯಿಂದ ಯಾವುದಾದರು ಕುಟುಂಬಗಳು ಕೈಬಿಟ್ಟು ಹೋಗಿದ್ದಲ್ಲಿ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಗಣತಿದಾರರನ್ನು ನಿಯೋಜಿಸಿ ಗಣತಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಯಾವುದೇ ಗೊಂದಲ ಮತ್ತು ದೂರು ಇದ್ದಲ್ಲಿ ಕಂಟ್ರೋಲ್ ರೂಂ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.









