)
Hubballi: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಬುಧವಾರ ಗಂಭೀರ ಗಲಾಟೆಗೆ ತುತ್ತಾಗಿ, ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರನ್ನು ಅಮಾನತ್ತು ಮಾಡಲಾಗಿದೆ. ಇದರೊಂದಿಗೆ ಸಭೆಯ ವೇಳೆ ಮೂರನೇ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಂಟಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಸದನದಲ್ಲಿ ಪ್ರಶ್ನೆಗಳನ್ನು ಎತ್ತಿದ್ದ ಸಂದರ್ಭದಲ್ಲಿ, ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಂಡು, ಅವರನ್ನು ಸಭೆಯಿಂದ ಹೊರಹಾಕಲು ಮಾರ್ಷಲ್ಗಳನ್ನು ಕಳಿಸಿದರು. ಈ ವೇಳೆ ಸುವರ್ಣ ಕಲ್ಲಕುಂಟ್ಲ ಅವರು ಕೆಳಗೆ ಬಿದ್ದು ಅಸ್ವಸ್ಥರಾದರು.
ಸ್ಥಳಕ್ಕಾಗಮಿಸಿದ ಪಾಲಿಕೆಯ ವೈದ್ಯರ ತಂಡ ತಕ್ಷಣವೇ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ದಾಖಲಿಸಿತು.
ಬಿಜೆಪಿಯ ಹಿಟ್ಲರ್ ಆಡಳಿತ: ಕಾಂಗ್ರೆಸ್ ಪಕ್ಷದ ಗಂಭೀರ ಆರೋಪ
ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯರು ಬಿಜೆಪಿ ಆಡಳಿತವನ್ನು ತೀವ್ರವಾಗಿ ಟೀಕಿಸಿದರು. "ಅಭಿವೃದ್ಧಿಗೆ ಸರ್ಕಾರ ನೀಡಿದ ₹10 ಕೋಟಿ ಅನುದಾನ ವಿಷಯವನ್ನು ಕಲಾಪ ಪಟ್ಟಿಯಿಂದ ತೆಗೆಯಲಾಗಿದೆ. ನಾವು ಪ್ರಶ್ನೆ ಕೇಳಿದಾಗಲೇ ಸಭೆಯಿಂದ ಹೊರಹಾಕುತ್ತಿದ್ದಾರೆ," ಎಂದು ಆರೋಪಿಸಿದರು.
ಮೇಯರ್ ಪ್ರತಿಕ್ರಿಯೆ: ಸಭೆಗೆ ಅಗೌರವ ತೋರಿದವರ ವಿರುದ್ಧ ಕ್ರಮ
ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮೇಯರ್ ಜ್ಯೋತಿ ಪಾಟೀಲ್, "ಇದು ಹಿಂದಿನ ಬಾರಿ ಮುಂದೂಡಲಾದ ಸಾಮಾನ್ಯ ಸಭೆಯ ಮುಂದುವರಿಕೆ. ಆದರೆ ವಿರೋಧ ಪಕ್ಷದವರು ಸದನದ ಕೆಲಸವನ್ನು ಅಡ್ಡಿಪಡಿಸಿದ್ದಾರೆ. ಹಿಟ್ಲರ್ ಆಡಳಿತ ಎನ್ನುವುದು ತಪ್ಪು. ಸಭೆಗೆ ಅಪಮಾನವಾಗುವ ರೀತಿ ವರ್ತನೆ ಮಾಡಿದ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಲಾಗಿದೆ," ಎಂದು ಸ್ಪಷ್ಟಪಡಿಸಿದರು.
ಅಮಾನತುಗೊಂಡ ಸದಸ್ಯರು:
ರಾಜು ಕಮತಿ
ಸುವರ್ಣ ಕಲ್ಲಕುಂಟ್ಲ
ದೊರೆರಾಜ್