)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗ ಮಂಜುನಾಥ ಎಂಬಾತ ಈ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ರಾಜ್ಯಪಾಲರ ಆದೇಶಾನುಸಾರ ಎನ್ನುವ ನಕಲಿ ಆದೇಶ ಪತ್ರಗಳನ್ನ ನೀಡಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ರಾಜ್ಯಪಾಲರು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಕಲಿ ಸಹಿ ಇರುವ ಈ ಆದೇಶ ಪ್ರತಿಗಳನ್ನೂ ವಿತರಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಕೊಡಿಸುವುದಾಗಿ ಮೋಸ ಮಾಡಲಾಗಿದೆ. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಕ ಎನ್ನುವಂತೆ ನಕಲಿ ಆದೇಶ ಪ್ರತಿಯನ್ನೂ ಈ ಮಂಜುನಾಥ ಮಲಸರ್ಜ್ ನೀಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಲಾಗಿದೆ.
ಬೈಲಹೊಂಗಲ, ಖಾನಾಪುರ, ಬೆಳಗಾವಿ ಸೇರಿ ಒಟ್ಟು 16ಜನರಿಗೆ ಈ ರೀತಿ ವಂಚನೆ ಮಾಡಲಾಗಿದೆ. ಪೋನ್ ಪೇ, ಬ್ಯಾಂಕ್ ಅಕೌಂಟ್ ಮೂಲಕ 34ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಲಾಗಿದೆ ಎಂದು ಜಯಂತ್ ತಿನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ವಂಚನೆ ಬಗ್ಗೆ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಕೂಡಾ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ ಎಂದು ಜಯಂತ್ ತಿನೇಕರ್ ತಿಳಿಸಿದ್ದಾರೆ. ಖಾನಾಪುರ ತಾಲೂಕಿನ ಗಂದಿಗವಾಡದ ಕಾವ್ಯಾ ಯಳ್ಳೂರ ಎಂಬ ಯುವತಿ ದೂರು ದಾಖಲಿಸಿದ್ದಾರೆ. 15ಕ್ಕೂ ಹೆಚ್ಚು ಸಲ ಠಾಣೆಗೆ ಹೋಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿಲ್ಲವಾದರೂ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ತಮ್ಮ ವ್ಯಾಪ್ತಿಗೆ ಬರದೇ ಹೋದರೂ ಕಿತ್ತೂರು ಪೊಲೀಸರು ನಿರಂತರ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಲಿಖಿತ ಹೇಳಿಕೆ ಕೊಟ್ಟರೂ ಯಾವುದೇ ದೂರು ಸ್ವೀಕರಿಸಿಲ್ಲ. ಕರ್ನಾಟಕ ಸರ್ಕಾರದ ಲೋಗೋ, ರಾಜ್ಯಪಾಲ ನಕಲಿ ಸಹಿ ಇದೆ. ಆದರೂ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿಲ್ಲ ಎಂದು ದೂರಲಾಗಿದೆ. ಈ ಬಗ್ಗೆ ರಾಜ್ಯಪಾಲರು, ಸಿಎಂ, ಗೃಹ ಸಚಿವರಿಗೂ ಪತ್ರದ ಮೂಲಕ ದೂರು ನೀಡಿರುವುದಾಗಿ ಬೆಳಗಾವಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಜಯಂತ್ ತಿನೇಕರ್ ಹೇಳಿದ್ದಾರೆ.