)
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಜರ್ಮನಿಯ ಬಾನ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ "ಗ್ಲೋಬಲ್ ಚೇಂಜ್ಮೇಕರ್ ಅಕಾಡೆಮಿ"ಯಲ್ಲಿ ಭಾಗವಹಿಸಿದ್ದು, 30 ದೇಶಗಳ 30 ಸಂಸದರ ಪೈಕಿ ಭಾರತದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾದ್ರೆ ಏನಿದು ಕಾರ್ಯಕ್ರಮ?
ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಜರ್ಮನಿಯ ಬಾನ್ನಲ್ಲಿರುವ ವಿಶ್ವಸಂಸ್ಥೆಯ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿರುವ "ಗ್ಲೋಬಲ್ ಚೇಂಜ್ಮೇಕರ್ ಅಕಾಡೆಮಿ ಫಾರ್ ಪಾರ್ಲಿಮೆಂಟೇರಿಯನ್ಸ್" (G-CAP) ಎಂಬ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಭಾಗವಹಿಸಿದ್ದಾರೆ.
G20 ಗ್ಲೋಬಲ್ ಲ್ಯಾಂಡ್ ಇನಿಶಿಯೇಟಿವ್ ಮತ್ತು ಯುನೈಟೆಡ್ ನೇಷನ್ಸ್ ಸಿಸ್ಟಮ್ ಸ್ಟಾಫ್ ಕಾಲೇಜ್ (UNSSC) ಜಂಟಿಯಾಗಿ ಆಯೋಜಿಸಿರುವ ಈ ವೇದಿಕೆಯಲ್ಲಿ, ಜಗತ್ತಿನ 30 ಪ್ರಮುಖ ರಾಷ್ಟ್ರಗಳ 30 ಸಂಸದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಮಹತ್ವದ ಶಿಬಿರಕ್ಕೆ ಭಾರತದಿಂದ ಡಾ. ಕೆ. ಸುಧಾಕರ್ ಅವರನ್ನು ಆಯ್ಕೆ ಮಾಡಿರುವುದು ವಿಶೇಷ.
ಕಾರ್ಯಕ್ರಮದ ಮೊದಲ ದಿನ, 'ವಾದ ಮತ್ತು ವ್ಯೂಹಾತ್ಮಕ ಸಂವಹನ' ಎಂಬ ವಿಷಯದ ಮೇಲೆ ಗೋಷ್ಠಿ ನಡೆಯಿತು. ಭೂಮಿಯ ಸಂರಕ್ಷಣೆ, ಮರುಭೂಮಿಯಾಗುವಿಕೆಯನ್ನು ತಡೆಗಟ್ಟುವುದು ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಸವಾಲುಗಳ ಕುರಿತು ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಯಿತು. ಕೇವಲ ನೀತಿಗಳನ್ನು ರೂಪಿಸುವುದು ಮಾತ್ರವಲ್ಲ, ಅವುಗಳನ್ನು ಜನರಿಗೆ ತಲುಪಿಸುವ ಕಲೆಯೂ ಮುಖ್ಯ ಎಂಬುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ.