)
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶರಾವತಿ ನದಿ ಮೈದುಂಬಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 40 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಡ್ಯಾಂ ನ 11 ರೇಡಿಯಲ್ ಕ್ರೆಸ್ಟ್ ಗೇಟ್ ಗಳಿಂದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಜೋಗ ಜಲಪಾತಕ್ಕೆ ಮೆರುಗು ಬಂದಿದ್ದು, ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ.
ಕಳೆಕಟ್ಟಿದ ಜೋಗದ ಜಲಪಾತ :
ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜೋಗಜಲಪಾತ ಮತ್ತಷ್ಟು ಕಳೆ ಕಟ್ಟಿದೆ. ಈ ಬಾರಿ ಜೋಗದಲ್ಲಿ ಮುಸುಲಧಾರೆಗೆ ಮಾಯಾಲೋಕವೇ ತೆರೆದುಕೊಂಡಿದೆ. ಮಂಜು ಮುಸುಕಿನಿಂದಾಗಿ ಆಗಸ ಭೂಮಿ ಒಂದಾದಂತೆ ಕಾಣುವುದರಿಂದ ಜೋಗ ಜಲಪಾತ ಆಗಿದ್ದಾಂಗೆ ಮಾಯವಾದಂತೆ ಭಾಸವಾಗುತ್ತದೆ. ಕ್ಷಣಕಾಲ ಕಾಣುವ ಜಲಪಾತ ಮತ್ತೆ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾದಂತೆ ಗೋಚರವಾಗುತ್ತದೆ.
ಜೋಗ ಪರಿಸರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ, ರಾಣಿ, ರೋರರ್ ರಾಕೇಟ್ ಜಲಧಾರೆಗಳ ಸೌಂದರ್ಯ ಹೆಚ್ಚಿದೆ. ಮಳೆಯ ರಭಸಕ್ಕೆ ಆವಿಯಾಗಿ ಭುವನದಿಂದ ಆಕಾಶಕ್ಕೆ ಚಿಮ್ಮುವಂತೆ ತೋರುವ ಮಂಜು ಮುಸುಕು ಜಲಪಾತ ವೀಕ್ಷಣೆಗೆ ತೊಡಕುಂಟು ಮಾಡಿದರೂ, ಇಲ್ಲಿನ ಪರಿಸರದ ಸೌಂದರ್ಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತದೆ. ನಿಜಕ್ಕೂ ಜೋಗ ಜಲಪಾತದಲ್ಲಿ ಬೆಳ್ಳಿಮೋಡಗಳ ಸಾಲುಗಳು ಚಿತ್ತಾರವನ್ನು ಬಿಡಿಸುತ್ತಾ ಜಲಧಾರೆಗೆ ಮೆರುಗನ್ನು ನೀಡುತ್ತಿವೆ. ಹಸಿರು ಸಿರಿಯ ಮದ್ಯೆ ಬೆಳ್ಳಿಮೋಡಗಳ ಸಾಲುಗಳು ಹಾದುಹೋಗುವುದರಿಂದ ಜೋಗ ಕ್ಷಣಕ್ಷಣಕ್ಕೂ ಕಣ್ಮರೆಯಾಗುವುದು ಪ್ರವಾಸಿಗರಿಗೆ ವಿಸ್ಮಯವನ್ನುಂಟುಮಾಡುತ್ತದೆ.
ಜೋಗ ಪರಿಸರದಲ್ಲಿ ಸೂಸುವ ಮಳೆ, ಮಂಜು ಮುಸುಕಿನ ವಾತಾವರಣ ಕಣ್ಮನಗಳಲ್ಲಿ ಬಹುಕಾಲ ಉಳಿಯುತ್ತದೆ. ಪ್ರತಿ ಮಳೆಗಾಲದಲ್ಲೂ ಜೋಗದ ಹಸಿರು ಸಿರಿಯಲ್ಲಿ ತನ್ನ ವೈಭವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸುತ್ತಲೇ ದುಮ್ಮುಕ್ಕಿ ಪ್ರಪಾತ ಸೇರುವ ಶರಾವತಿಗೆ ಈ ಬಾರಿ ವಿಶೇಷವಾಗಿ ಮಂಜುಮುಸುಕಿನ ಬೆಳ್ಳಿಮೋಡಗಳ ಸಾಲುಗಳು ಸಾಥ್ ನೀಡಿರುವುದರಿಂದ ಜೋಗ ಜಲಪಾತದಲ್ಲಿ ಸೌಂದರ್ಯ ಕಳೆಕಟ್ಟಿ ನಿಂತಿದೆ. ಇದು ವಿದೇಶಿಗರನ್ನು ಸಹ ಆಕರ್ಷಿಸುತ್ತಿದೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಮಲೆನಾಡಿನ ಬೆಟ್ಟಗುಡ್ಡಗಳು ಹಸರಿನ ಸಿರಿಗೆ ತೆರೆದುಕೊಳ್ಳುತ್ತದೆ. ಇದಕ್ಕೆ ಶರಾವತಿ ಕಣಿವೆ ಪ್ರದೇಶ ಕೂಡ ಹೊರತಾಗಿಲ್ಲ. ಇಲ್ಲಿನ ಮುಂಗಾರು ವರ್ಷಧಾರೆ ಪ್ರವಾಸಿಗರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತದೆ.
ಮಳೆ ಹೀಗೆಯೇ ಮುಂದುವರೆದರೆ ಜೋಗ ಜಲಪಾತ ನಯಾಗರ ಫಾಲ್ಸ್ ನಂತೆ ಧುಮ್ಮಿಕ್ಕಿದರೂ ಅಚ್ಚರಿಯಿಲ್ಲ. ಜೋಗ ಪರಿಸರದಲ್ಲಿ ಹವಮಾನ ಕ್ಷಣಕ್ಷಣಕ್ಕೂ ಬದಲಾಗುತ್ತಾ ಜೋಗ ಜಲಪಾತ ಸೌಂದರ್ಯಕ್ಕೆ ತೆರೆದುಕೊಳ್ಳುವುದನ್ನು ನೋಡಿ ಪ್ರವಾಸಿಗ ಹಾಗೆಯೇ ಮೌನಕ್ಕೆ ಶರಣಾಗುತ್ತಾನೆ.