ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಗ್ರಾಮವಾಸ್ತವ್ಯ ಮಾಡುವ ಬಗ್ಗೆ ಹಲವಾರು ಟೀಕೆಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಗಿಮಿಕ್ಸ್ ಎಂತಲೂ ಕರೆದಿದ್ದಾರೆ. ಈ ಮೊದಲೇ ತಮ್ಮ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ, ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿ ನಾಯಕರ ಕುಹಕ, ವ್ಯಂಗ್ಯ ಮತ್ತು ಟೀಕೆಗಳನ್ನು ಗಮನಿಸಿದ್ದೇನೆ. ಗ್ರಾಮ ವಾಸ್ತವ್ಯ ಮಾಡಲು ಮಾನವೀಯ ಕಳಕಳಿ, ನೈಜ ಅಂತಃಕರಣ ಇರಬೇಕು. ಗ್ರಾಮ ವಾಸ್ತವ್ಯ ಘೋಷಣೆಗೆ ಜನರಿಂದ ದೊರೆತ  ಸ್ಪಂದನೆಯೇ ಬಿಜೆಪಿ ನಾಯಕರಿಗೆ ಉತ್ತರ ಎಂದಿದ್ದರು. ಇದೀಗ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಕುರಿತು ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

Chief minister of Karnataka ಫೇಸ್ ಬುಕ್ ಖಾತೆಯಲ್ಲಿ ಗ್ರಾಮವಾಸ್ತವ್ಯ ಕುರಿತು ಮುಖ್ಯಮಂತ್ರಿಗಳ ಎರಡು ಮಾತು ಎಂಬ ಶೀರ್ಷಿಕೆ ಅಡಿಯಲ್ಲಿ ಈ ರೀತಿ ಹೇಳಲಾಗಿದೆ...


ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:


ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ.


ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.


ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, ಐದುನೂರಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ - ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೆ ಇರುವುದು ವಿಷಾದನೀಯ.


ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ, ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ.


ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.


ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.


ಅಂತೆಯೇ ಎಚ್ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್ಐವಿ/ ಏಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.


ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತಾ ಪ್ರಯತ್ನಿಸುವೆ.


- ಹೆಚ್.ಡಿ. ಕುಮಾರಸ್ವಾಮಿ