ಮೈಸೂರು: "ಆಗ ನನಗೆ 7-8 ವರ್ಷ ವಯಸ್ಸು. ದಸರಾ ಮೆರವಣಿಗೆ ನೋಡಲು ಅಪ್ಪನ ಜೊತೆ ಮೈಸೂರಿಗೆ ಹೋಗಿದ್ದೆ. ಅದುವೇ ನಾನು ಮೊಟ್ಟ ಮೊದಲ ಬಾರಿಗೆ ನೋಡಿದ ಮೆರವಣಿಗೆ, ದಸರಾ ಉತ್ಸವ.."


COMMERCIAL BREAK
SCROLL TO CONTINUE READING

"ಬನ್ನಿಮಂಟಪದ ಬಳಿ ಇರುವ ಬಂಬೂ ಬಜಾರ್‍ನಲ್ಲಿ ಮೆರವಣಿಗೆ ನೋಡಲು ಮೆಟ್ಟಿಲುಗಳ ಮೇಲೆ ಅಪ್ಪನೊಂದಿಗೆ ಕಾದು ನಿಂತಿದ್ದೆ. ಅಂಬಾರಿಯ ಮೇಲೆ ಮಹಾರಾಜರು ಬರುವ ದೃಶ್ಯ ನೋಡಲು ಕಾತರನಾಗಿದ್ದೆ". 


"ಆದರೆ, ಜನ ಜಂಗುಳಿಯಲ್ಲಿ ಮೆರವಣಿಗೆ ಕಾಣುತ್ತಲೇ ಇರಲಿಲ್ಲ. ಜೊತೆಗಿದ್ದ ಅಪ್ಪ, ಮಹಾರಾಜರು ಬಂದರು, ಮಹಾರಾಜರು ಬಂದರು ಕೈ ಮುಗಿ ಎಂದರು. ನನಗೇನೂ ಕಾಣುತ್ತಿಲ್ಲ ಎಂದೆ. ಆಗ ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಮೆರವಣಿಗೆ ತೋರಿಸಿದರು. ಆ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದಿದೆ. ನನ್ನ ಮೊದಲ ದಸರಾ ಮೆರವಣಿಗೆಯ ಅನುಭವವನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ".


ಮೊದಲ ಬಾರಿಗೆ ದಸರಾ ವೀಕ್ಷಿಸಿದ ಅನುಭವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ಆಕಾಶವಾಣಿ"ಯೊಂದಿಗೆ ಹಂಚಿಕೊಂಡಿದ್ದು ಹೀಗೆ...


ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಆಕಾಶವಾಣಿಗೆ ವಿಶೇಷ ಸಂದರ್ಶನ ನೀಡಿದ ಮುಖ್ಯಮಂತ್ರಿಯವರು, ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. 


"ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ, ಅಷ್ಟೇ ಅಲ್ಲ, ಎನ್‍ಸಿಸಿ ಕೆಡೆಟ್ ಆಗಿಯೂ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದೇನೆ. ಶಾಸಕನಾಗಿ, ಮಂತ್ರಿಯಾಗಿ, ಇದೀಗ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದರು. 


ವಿಶ್ವಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರ್ಕಾರ ಕೈಗೊಂಡಿರುವ ಸಿದ್ಧತೆ, ಆಯೋಜಿಸಿರುವ ಕಾರ್ಯಕ್ರಮಗಳು, ರಾಜ್ಯ, ಹೊರರಾಜ್ಯ, ದೇಶ, ವಿದೇಶದ ಪ್ರವಾಸಿಗರಿಗೆ ಒದಗಿಸಿರುವ ಸೌಲಭ್ಯಗಳು, ಎಲ್ಲವನ್ನೂ ಸಿದ್ದರಾಮಯ್ಯ ಅವರು ಸಂದರ್ಶನದ ವೇಳೆ ವಿವರಿಸಿದರು.