ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ: ಹೆಚ್.ಡಿ.ದೇವೇಗೌಡ ಸ್ಪಷ್ಟನೆ
ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲಾ ಗೊಂದಲಗಳೂ ನಿವಾರಣೆಯಾಗಿವೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ದೇವೇಗೌಡರು ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಕಾಂಗ್ರೆಸ್ ಆಗಲೀ, ಜೆಡಿಎಸ್ ಪಕ್ಷವಾಗಲಿ ಬಿಜೆಪಿ ಜೊತೆ ಹೋಗಲು ಸಿದ್ಧವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದ ಗೊಂದಲಗಳೆಲ್ಲಾ ನಿವಾರಣೆಯಾಗಿವೆ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ಇಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ' ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಬಗ್ಗೆ ಹಲವು ಊಹಾಪೋಹಗಳು, ವದಂತಿಗಳು ಹಬ್ಬಿದೆ. ಆದರೆ ಇಂತಹ ಯಾವುದೇ ಸಂದರ್ಭ ಸಮ್ಮಿಶ್ರ ಸರ್ಕಾರದಲ್ಲಿಲ್ಲ. ಎಲ್ಲಾ ಗೊಂದಲಗಳೂ ನಿವಾರಣೆಯಾಗಿವೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ದೇವೇಗೌಡರು ಹೇಳಿದರು.