)
Chitradurga: ಚಿತ್ರದುರ್ಗ ಜಿಲ್ಲೆಯಲ್ಲೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ನಗರದ ಹೊರವಲಯದ ಗೋನೂರು ಬ್ರಿಡ್ಜ್ (ಹೊಸ ಹೆದ್ದಾರಿ) ಸಮೀಪದ ಖಾಸಗಿ ಜಮೀನಿನಲ್ಲಿ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತಳನ್ನು ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ವರ್ಷಿತಾ ಎಂದು ಗುರುತಿಸಲಾಗಿದೆ. ವರ್ಷಿತಾ ಚಿತ್ರದುರ್ಗದಲ್ಲಿ ವಾಸ್ತವ್ಯವಿದ್ದು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು.
ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹವನ್ನು ನೋಡಿದ ನಂತರ, ಕೊಲೆ ಮಾಡಿ ಪೆಟ್ರೋಲ್ ಎರಚಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸ್ಥಳೀಯರಲ್ಲಿ ಭಾರೀ ಆತಂಕ ಉಂಟಾಗಿದೆ.
ಮೃತದೇಹವನ್ನು ಪೋಸ್ಟ್ಮಾರ್ಟಂಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಈ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕೃತ್ಯ ಎಸಗಿದವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.