)
ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಯಲ್ಲಿ ವಿವಾಹವಾದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರೋ ಗಿರೀಶ್ ಮಟ್ಟಣ್ಣನವರ್ ವಿರುದ್ದ ಮಹಿಳಾ ಆಯೋಗಕ್ಕೆ ಧರ್ಮಸ್ಥಳ ಭಕ್ತರು ದೂರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಹೆಣ್ಣುಮಕ್ಕಳ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ್ ಜೊತೆ ಸರಿಸುಮಾರು ಏಳೆಂಟು ಮಹಿಳೆಯರು ಮಹಿಳಾ ಆಯೋಗಕ್ಕೆ ಬಂದು ಗಿರೀಶ್ ಮಟ್ಟಣ್ಣನವರ್ ವಿರುದ್ದ ದೂರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಗಳಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಮಟ್ಟಣ್ಣ ಹೀನಾಯವಾಗಿ ಮಾತನಾಡಿದ್ದಾರೆ. ಇದು ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿದೆ ಎಂದು ಅವರು ಕಿಡಿ ಕಾರಿದ್ದಾರೆ. ಕೇವಲ ಬಡವರು ಮಾತ್ರವಲ್ಲ ಅದೆಷ್ಟೋ ಜನರು ಹರಕೆ ಹೊತ್ತು ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುತ್ತಾರೆ. ಸಾವಿರಾರು ಕುಟುಂಬಗಳು ಅಲ್ಲಿ ಮದುವೆಯಾಗಿ ಉತ್ತಮ ಜೀವನ ನಡೆಸುತ್ತಿವೆ. ಅಂತಹ ಹೆಣ್ಣುಮಕ್ಕಳನ್ನ ಗಿರೀಶ್ ಮಟ್ಟಣ್ಣನವರ್ ಅವಮಾನಿಸಿದ್ದಾರೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ದೂರು ಸ್ವೀಕರಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅವರು ಗಿರೀಶ್ ಮಟ್ಟಣ್ಣನವರ್ ಹೆಣ್ಣು ಮಕ್ಕಳ ಘನತೆಗೆ ಧಕ್ಕೆ ತಂದಿದ್ದರೆ , ಹೆಣ್ಣು ಮಗಳ ಚಾರಿತ್ರಿಕ ವಧೆ ಮಾಡಿದ್ದರೆ ಪೊಲೀಸ್ ಆಯುಕ್ತರಿಗೆ ಎಫ್ ಐಆರ್ ಮಾಡಲು ಸೂಚಿಸುತ್ತೇನೆ ಎಂದರು..
ಒಟ್ಟಿನಲ್ಲಿ ಧರ್ಮಸ್ಥಳದ ವಿರುದ್ದ ಷಡ್ಯಂತರ ರೂಪಿಸಿದವರಿಗೆಲ್ಲಾ ಕಾನೂನಿನ ಕುಣಿಕೆ ಬಿಗಿ ಆಗ್ತಾ ಇರೋದಂತೂ ಸತ್ಯ.