)
ಧಾರವಾಡ: ಧಾರವಾಡದ ಟಿ.ವಿ.ಟವರ್ನ ನಿವಾಸಿ ಇಸ್ಮೈಲ್ ಮಾನಿಕ್ ಖರೀದಿಸಿದ ಇಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸಮಸ್ಯೆಗೆ ಸಂಬಂಧಿಸಿದಂತೆ ಟ್ರೈಯೋ ಗ್ರೂಪ್ಸ್ ಪ್ಯುವರ್ ಎನರ್ಜಿ ಪ್ರೈ. ಲಿ. ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಕಠಿಣ ಕ್ರಮಕ್ಕೆ ಆದೇಶಿಸಿದೆ.
ಇಸ್ಮೈಲ್ ಮಾನಿಕ್ ಅವರು 25/10/2022 ರಂದು ರೂ.80,000 ಪಾವತಿಸಿ ಟ್ರೈಯೋ ಗ್ರೂಪ್ಸ್ನಿಂದ ಇಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು. 5 ವರ್ಷದ ವಾರಂಟಿಯೊಂದಿಗೆ ಒಡಮಾಡಿಕೊಂಡಿದ್ದ ಈ ವಾಹನದ ಬ್ಯಾಟರಿ ಕೆಲವೇ ತಿಂಗಳಲ್ಲಿ ಕಾರ್ಯನಿರ್ವಹಿಸದೆ ರಸ್ತೆಯಲ್ಲಿ ನಿಲುಗಡೆಯಾಗುವ ಸಮಸ್ಯೆ ಎದುರಾಯಿತು. ಜೊತೆಗೆ, ಕಂಪನಿ ಭರವಸೆ ನೀಡಿದ 70 ಕಿ.ಮೀ. ಮೈಲೇಜ್ ಬದಲು ಕೇವಲ 20 ಕಿ.ಮೀ. ಮಾತ್ರ ದೊರಕುತ್ತಿತ್ತು.
ಈ ಬಗ್ಗೆ ದೂರುದಾರರು ಕಂಪನಿಗೆ ತಿಳಿಸಿದಾಗ, ವಾರಂಟಿಯಿದ್ದರೂ ರೂ.1,000 ಹೆಚ್ಚುವರಿ ಹಣ ಪಡೆದು ಬ್ಯಾಟರಿಯನ್ನು ರಿಪೇರಿ ಮಾಡಿಕೊಡಲಾಗಿತ್ತು. ಆದರೆ, ಸಮಸ್ಯೆ ಮತ್ತೆ ಮರುಕಳಿಸಿತು. ಕಂಪನಿಯು ದೂರುದಾರರ ದೂರಿಗೆ ಸರಿಯಾಗಿ ಸ್ಪಂದಿಸದೆ, ಸೇವಾ ಕೇಂದ್ರವನ್ನೂ ಕಾಯಂ ಮುಚ್ಚಿದ್ದರಿಂದ ಗ್ರಾಹಕರಿಗೆ ತೊಂದರೆಯಾಯಿತು.ಈ ಸಂಬಂಧ ದೂರುದಾರರು 20/08/2024 ರಂದು ಧಾರವಾಡ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು ವಿಚಾರಣೆ ನಡೆಸಿ, ಕಂಪನಿಯ ಕ್ರಮವು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಯಾಗಿದೆ ಎಂದು ತೀರ್ಪು ನೀಡಿದರು.ಆಯೋಗದ ಆದೇಶದಂತೆ, ಟ್ರೈಯೋ ಗ್ರೂಪ್ಸ್ ಪ್ಯುವರ್ ಎನರ್ಜಿ ಕಂಪನಿಯು ಒಂದು ತಿಂಗಳ ಒಳಗೆ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಖರೀದಿಗೆ ಪಾವತಿಸಿದ ರೂ.80,000 ಮರಳಿಸಬೇಕು. ಜೊತೆಗೆ, ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಒತ್ತಡಕ್ಕೆ ರೂ.50,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ನೀಡಬೇಕೆಂದು ಆಯೋಗ ನಿರ್ದೇಶಿಸಿದೆ.