)
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ 2024-25ನೇ ಸಾಲಿನ 33ನೇ ವಾರ್ಷಿಕ ಸಾಮಾನ್ಯ ನಿಕಾಯ ಸಭೆಯು ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಟಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉದ್ದೇಶಿಸಿ ಮಾತನಾಡಿದ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡರು. ರಾಜ್ಯದಲ್ಲಿ ಸಹಕಾರ ಚಳವಳಿಯ ಬೆಳವಣಿಗೆ ಸದೃಢವಾಗಿದ್ದು, ಮುಂಬರುವ ದಿನಗಳಲ್ಲಿ ಸಹಕಾರ ಸಂಸ್ಥೆಗಳು ಬಹುಸೇವಾ ಸಂಸ್ಥೆಗಳಾಗಿ ರೂಪುಗೊಂಡು ಸದಸ್ಯ ಸೇವೆಗಳ ಮೂಲಕ ಆರ್ಥಿಕವಾಗಿ ಬಲಗೊಳ್ಳಬೇಕು ಎಂದರು.
ಸಹಕಾರ ಚಳವಳಿಯ ಜಿಲ್ಲಾವಾರು ಮಾಹಿತಿಗಳು ಜಿಲ್ಲಾ ಸಹಕಾರ ಯೂನಿಯನ್ಗಳಲ್ಲಿ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಯೂನಿಯನ್ಗಳು ಮಾಹಿತಿ ಕೇಂದ್ರಗಳಾಗಿ ರೂಪುಗೊಂಡು ಪರಿಣಾಮಕಾರಿಯಾಗಿ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಯುವಜನರು ಸಹಕಾರ ಚಳವಳಿಯಲ್ಲಿ ಭಾಗವಹಿಸುವಂತಾಗಲು ಸಹಕಾರ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗುವಂತೆ ಸಹಕಾರ ಮಹಾಮಂಡಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು. ಸಹಕಾರಿಗಳು ತ್ಯಾಗ ಮನೋಭಾವದಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಯುವಜನರಿಗೆ ಮಾದರಿಯಾಗಬೇಕು ಎಂದರು.
ವೇದಿಕೆಯ ಮೇಲೆ ಸಹಕಾರ ಮಹಾಮಂಡಳದ ಉಪಾಧ್ಯಕ್ಷರಾದ ಜಗದೀಶ್ ಎಂ. ಕವಟಗಿಮಠ ಅವರು ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್. ನವೀನ್ ಅವರು ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು. ಕೊನೆಯಲ್ಲಿ ಮಹಾಮಂಡಳ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ವಂದನಾರ್ಪಣೆ ಸಲ್ಲಿಸಿದರು. ಸಲಹೆಗಾರರಾದ ಪಿ. ರುದ್ರಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.