)
ಬಾಗಲಕೋಟೆ : ಆಕೆ ಓರ್ವ ಪ್ರತಿಭಾವಂತ ಬಡ ವಿದ್ಯಾರ್ಥಿನಿ, ಮನೆಯಲ್ಲಿನ ಬಡತನದಿಂದ ಮುಂದಿನ ಶಿಕ್ಷಣಕ್ಕೆ ಹಣಕಾಸಿನ ತೊಂದರೆಯಾಗಿತ್ತು, ಹೀಗಿರುವಾಗ ಆ ವಿದ್ಯಾರ್ಥಿನಿಯ ಆರ್ಥಿಕ ನೆರವಿಗೆ ನಿಂತವರು ಬೇರೆ ಯಾರೂ ಅಲ್ಲ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್. ಹಾಗಾದ್ರೆ ಆ ಕ್ರಿಕೆಟಿಗ ಯಾರು, ಆ ವಿದ್ಯಾರ್ಥಿನಿಗೆ ನೆರವು ಸಿಕ್ಕಿದ್ದು ಹೇಗೆ? ಈ ಕುರಿತು ವರದಿ ಇಲ್ಲಿದೆ.
ಆಕೆಗೆ ಉನ್ನತ ಶಿಕ್ಷಣದ ಕಲಿಕೆಯ ಹಂಬಲ ಇತ್ತು, ಮನೆಯಲ್ಲಿ ಬಡತನದಿಂದ ಮಗಳನ್ನ ಕಾಲೇಜ್ ಕಲಿಸೋಕೆ ತಂದೆಗೆ ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಆ ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ನಿಂತವರು ಖ್ಯಾತ ಕ್ರಿಕೆಟಿಗ ರಿಷಬ್ ಪಂತ್.
ಹೀಗೆ ಬಡತನದ ಮಧ್ಯೆ ತನ್ನ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿನಿ ಜ್ಯೋತಿ ಕಣಬೂರ್. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದವಳು. ತಂದೆ ತೀರ್ಥಯ್ಯ ಹಾಗೂ ರೂಪಾ ದಂಪತಿಗಳ ಮಗಳು. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕ ಹೋಟೆಲ್ ಇರಿಸಿಕೊಂಡು 4 ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಇವುಗಳ ಮಧ್ಯೆ ಇಬ್ಬರು ಸಹೋದರರು ಹೊಲದಲ್ಲಿ ಕೂಲಿ ಮಾಡ್ತಿದ್ದಾರೆ.
ಪಿಯುಸಿ ವಾಣಿಜ್ಯ ವಿಭಾಗದಲ್ಲಿ 85 ಪ್ರತಿಶತ ಅಂಕ ಪಡೆದ ಜ್ಯೋತಿಗೆ ಮುಂದಿನ ವ್ಯಾಸಂಗಕ್ಕೆ ಹಣಕಾಸಿನ ತೊಂದರೆಯುಂಟಾಗಿತ್ತು. ಆಗ ಜ್ಯೋತಿಯ ಸಮಸ್ಯೆ ಕೇಳಿ ತಕ್ಷಣ ರಿಷಬ್ ಪಂತ್ ಆಕೆಯ ಮೊದಲ ವರ್ಷದ ಬಿಸಿಎ ತರಗತಿಗೆ ಅವಶ್ಯಕತೆ ಇರುವ 40 ಸಾವಿರ ಹಣ ನೆರವು ನೀಡಿದ್ದಾರೆ.
ಇನ್ನು ಕಣಬೂರ ಕುಟುಂಬದ ಕೊನೆಯ ಮಗಳಾಗಿರೋ ಜ್ಯೋತಿ ಹೊಲದಲ್ಲಿ ಕೆಲಸ ಮಾಡುತ್ತಲೇ ಬಂದ ಹಣದಿಂದ ಪಿಯುಸಿ ಶಿಕ್ಷಣ ಮುಗಿಸಿದ್ದಳು. ಬಳಿಕ ಜಮಖಂಡಿ ಬಿಎಲ್ ಡಿ ಕಾಲೇಜಿನಲ್ಲಿ ಬಿಸಿಎ ತರಗತಿಗೆ ಪ್ರವೇಶ ಪಡೆಯಲು ಮುಂದಾದಾಗ ಹಣಕಾಸಿನ ತೊಂದರೆಯುಂಟಾಗಿದೆ.
ಆಗ ತಂದೆ ತೀರ್ಥಯ್ಯ ಗ್ರಾಮದ ಅನಿಲ್ ಹುಣಸಿಕಟ್ಟಿ ಅವರ ಬಳಿ ಹೇಳಿದಾಗ, ಇವರ ಗೋಳು ಕೇಳಿ ಅನಿಲ್ ನೇರವಾಗಿ ಬೆಂಗಳೂರಿನ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುವ ತಮ್ಮ ಸ್ನೇಹಿತರ ಮೂಲಕ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಸಂಪರ್ಕಿಸಿದ್ದಾರೆ.
ಆಗ ರಿಷಬ್ ನೇರವಾಗಿ ಕಾಲೇಜ್ ಗೆ ಹಣ ಸಂದಾಯ ಮಾಡಿದ್ದಾರೆ. ಕ್ರಿಕೆಟಿಗ ರಿಷಬ್ ನೆರವಿನ ಹಿನ್ನೆಲೆಯಲ್ಲಿ ಬಿಎಲ್ ಡಿ ಸಂಸ್ಥೆಯಿಂದ ಅಭಿನಂದನಾ ಪತ್ರವನ್ನ ಬರೆಯಲಾಗಿದ್ದು, ರಿಷಬ್ ಪಂತ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಕೆಟ್ ಕ್ಷೇತ್ರದಲ್ಲಿ ತಾನು, ತಮ್ಮ ಸಾಧನೆ ಅಂತಾ ಬೀಗುತ್ತಿರೋ ಕ್ರಿಕೆಟಿಗರ ಮಧ್ಯೆ ರಿಷಬ್ ಪಂತ್ ಬಡ ವಿದ್ಯಾರ್ಥಿನಿಗೆ ಹಣಕಾಸಿನ ನೆರವು ನೀಡುವ ಮೂಲಕ ಗಮನಸೆಳೆದಿದ್ದು, ಅಭಿಮಾನಪಡುವ ಸಂಗತಿ ಆಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.