ಮಂಗಳೂರು : ನಿನ್ನೆ ಇಲ್ಲಿನ ಕಾಟಿಪಳ್ಳ ಬಳಿ ಹತ್ಯೆಯಾಗಿದ್ದ ಬಿಜೆಪಿ ಕಾರ್ಯಕರ್ತ ದೀಪಕ್  ಕುಟುಂಬಕ್ಕೆ ಮಂಗಳೂರು ಜಿಲ್ಲಾಧಿಕಾರಿ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ದೀಪಕ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು, ಗೃಹಸಚಿವರೇ ಸ್ಥಳಕ್ಕೆ ಬರಬೇಕು, ಅಲ್ಲಿಯವರೆಗೆ ಶವವನ್ನು ಹವಾನಿಯಂತ್ರಿತ ವಾಹನದಲ್ಲಿಡಬೇಕೆಂದು ಘೋಷಣೆಗಳನ್ನು ಕೂಗುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ದೀಪಕ್ ಸಂಬಂಧಿಕರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಶಶಿಕಾಂತ್, ಜಿಲ್ಲಾಧಿಕಾರಿ ನಿಧಿಯಿಂದ ಐದು ಲಕ್ಷ ರೂ. ಹಾಗೂ ಮುಖ್ಯಮಂತ್ರಿ ನಿಧಿಯಿಂದ ಐದು ಲಕ್ಷ ರೂ. ಸೇರಿ ಒಟ್ಟು ಹತ್ತು ಲಕ್ಷ ರೂಗಳ ಪರಿಹಾರವನ್ನು ಸ್ಥಳದಲ್ಲೇ ಘೋಷಿಸಿದ್ದಾರೆ.  


ಬಳಿಕ ದೀಪಕ್ ಊರಿನಲ್ಲಿಯೇ ಶವಯಾತ್ರೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಟಿಪಳ್ಳದ ಜನತಾ ಕಾಲನಿಯಲ್ಲಿರುವ ರುದ್ರಭೂಮಿಯಲ್ಲಿ ದೀಪಕ್ ಅಂತ್ಯಸಂಸ್ಕಾರ ನಡೆಸಲಾಗಿದೆ. 


ಮಂಗಳೂರು ಹೊರವಲಯದ ಕಾಟಿಪಳ್ಳ ಎಂಬಲ್ಲಿ ನಿನ್ನೆ ಮಧ್ಯಾಹ್ನ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಬಿಜೆಪಿ ಕಾರ್ಯಕರ್ತ ದೀಪಕ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿತ್ತು. ಈ ಸಂಬಂಧ ಈಗಾಗಲೇ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.