DK Shivakumar: ನಾಡದೇವತೆ ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತಲ್ಲ ಎಂದು ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಈ ಬಗ್ಗೆ ಹೇಳಿದ್ದೇನು ಗೊತ್ತಾ?

DK Shivakumar Chamundi Hills: ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿರುವ ವಿಚಾರ ಸಂಚಲನವನ್ನೇ ಸೃಷ್ಟಿಸಿದೆ. ಈ ಮಧ್ಯೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದೀಗ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಡಿಕೆಶಿ, ರಾಜವಂಶಸ್ಥರು, ನಮ್ಮ ಸರ್ಕಾರ ಎರಡು ಸೇರಿ ನಾಡದೇವತೆ ಅಂತ ಕರೆಯೋದು. ಇದು ಸರ್ಕಾರದ ಆಸ್ತಿ, ಎಲ್ಲೂ ಕೂಡ ಹಿಂದೂ ಧರ್ಮದ್ದು ಎಂದು ಹೇಳಿಲ್ಲ ಎಂದಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ರಾಜವಂಶಸ್ಥರು ಮತ್ತು ನಮ್ಮ ಸರ್ಕಾರ ಎರಡೂ ಒಟ್ಟಿಗೆ ಸೇರಿ ಚಾಮುಂಡೇಶ್ವರಿಯನ್ನು ನಾಡದೇವತೆ ಅಂತ ಕರೆಯೋದು. ಚಾಮುಂಡಿ ಬೆಟ್ಟ ಸರ್ಕಾರದ ಆಸ್ತಿ, ಎಲ್ಲೂ ಕೂಡ ಹಿಂದೂ ಧರ್ಮದ್ದು ಎಂದು ಹೇಳಿಲ್ಲ. ಚಾಮುಂಡಿ ಬೆಟ್ಟಕ್ಕೆ ಹಿಂದೂಗಳು ಮಾತ್ರ ಬರಬೇಕು ಅಂತ ಎಲ್ಲಿ ಹೇಳಿದ್ದಾರೆ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಚಾಮುಂಡೇಶ್ವರಿ ಎಲ್ಲ ಧರ್ಮದವರಿಗೂ ಆಶೀರ್ವಾದ ಮಾಡುವ ದೇವತೆ ಎಂದರು.
ಮೈಸೂರು ಮಹಾರಾಜರು ವಿದೇಶಿಗರನ್ನೂ ಆಹ್ವಾನಿಸುತ್ತಿದ್ದರು!
ಇದೇ ವೇಳೆ ನಾಡಹಬ್ಬಕ್ಕೆ ವಿದೇಶಿಗರು ಕೂಡ ಬರ್ತಾರೆ, ಎಷ್ಟು ಧರ್ಮದವರು ಬರ್ತಾರೆ. ಸ್ವತಃ ಮಹಾರಾಜರು ನಾಡಹಬ್ಬಕ್ಕೆ ವಿದೇಶಿಗರನ್ನೂ ಆಹ್ವಾನ ಮಾಡುತ್ತಿದ್ದರು. ಅವರೆಲ್ಲಾ ಯಾವ ಸಮುದಾಯ ಧರ್ಮಕ್ಕೆ ಸೇರಿದವರು. ಹೀಗಿರುವಾಗ ಬಾನುಮುಷ್ತಾಕ್ ಅವರನ್ನು ಬೆಟ್ಟ ಹತ್ತೋಕೆ ಬಿಡಬಾರದು ಅಂದ್ರೆ ಹೇಗೆ ಸಾಧ್ಯ? ನೀರು, ಸೂರ್ಯ ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ ಚರ್ಚ್ , ಮುಸ್ಲಿಂರ ಮಸೀದಿ , ಗೊಮ್ಮಟಗಿರಿಗೆ ನಮ್ಮನ್ನ ಬಿಡಲ್ವ. ಅವರ್ಯಾರು ನಮ್ಮನ್ನ ಬರಬಾರದು ಅಂತ ಹೇಳಿದ್ದಾರಾ? ಎಂದವರು ಪ್ರಶ್ನಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಜೊತೆ ಸೇರಿದ್ದಾರರಲ್ಲ, ಅವರು ಇತಿಹಾಸ ಮರೆತಿದ್ದಾರೆ. ನಾವು ಗೃಹಲಕ್ಷ್ಮಿಯ ಎರಡು ಸಾವಿರ ಹಣವನ್ನ ದೇವರ ಮುಂದಿಟ್ಟು ಪೂಜೆ ಮಾಡಿದ್ವಿ. ದೇವಿ ಆಶೀರ್ವಾದ ಮಾಡಿದ್ರು, ಎಲ್ಲಾ ಧರ್ಮದವರಿಗೂ ಗ್ಯಾರಂಟಿ ಹಣ ಕೊಡುತ್ತಿಲ್ವ. ಹೀಗಾಗಿ ಜಾತಿ ಧರ್ಮ ಬಣ್ಣ ಕಟ್ಟಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.