"ಅವರು ಮರ್ಯಾದೆಯಾಗಿ ಇದ್ದರೆ ಕ್ಷೇಮ"- ಸಿಟ್ಟಿನಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಹೀಗಂದಿದ್ದು ಯಾರಿಗೆ?

"ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್‌ಎಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

Written by - Bhavishya Shetty | Last Updated : Mar 20, 2025, 10:19 PM IST
    • ದ್ವೇಷ ರಾಜಕಾರಣ ಎಂಬುದು ಅವರ ಡಿಎನ್‌ಎಯಲ್ಲಿದೆ
    • ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ?
    • ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್
"ಅವರು ಮರ್ಯಾದೆಯಾಗಿ ಇದ್ದರೆ ಕ್ಷೇಮ"- ಸಿಟ್ಟಿನಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಹೀಗಂದಿದ್ದು ಯಾರಿಗೆ?
DK Shivakumar

ಬೆಂಗಳೂರು: "ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್‌ಎಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ: ಯುಗಾದಿ ವೇಳೆಗೆ ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ! ಡಿಎ ಬಗ್ಗೆ ಮತ್ತೊಂದು ಆಘಾತದ ನಿರ್ಧಾರ!ವೇತನ ಹೆಚ್ಚಳದ ಮೇಲೆಯೇ ನೇರ ಪರಿಣಾಮ

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಆರೋಪದ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ಈ ವಿಚಾರವಾಗಿ ಎಸ್.ಆರ್ ಹಿರೇಮಠ್ ಅವರು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೂ ಹಿರೇಮಠ್ ಅವರು ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ?" ಎಂದು ತಿಳಿಸಿದರು.

ಕುಮಾರಸ್ವಾಮಿ ಮರ್ಯಾದೆಯಾಗಿ ಇದ್ದರೆ ಕ್ಷೇಮ
"ನನ್ನ ವಿರುದ್ಧ ಮೈಸೂರಿನಲ್ಲಿ ಅವರು (ಕುಮಾರಸ್ವಾಮಿ) ಏನೆಲ್ಲಾ ಮಾತನಾಡಿದರು, ಅವರ ತಂದೆ ನನ್ನ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ. ನನ್ನ ಮೇಲೆ, ನನ್ನ ಪತ್ನಿ, ನನ್ನ ತಂಗಿ ಹಾಗೂ ಸಹೋದರನ ಮೇಲೆ ಏನೆಲ್ಲಾ ಕೇಸ್ ಹಾಕಿದ್ದರು. ನನಗೂ ಬಳ್ಳಾರಿಗೂ ಸಂಬಂಧವಿಲ್ಲ ಆದರೂ ಅದಿರು ಕಳ್ಳತನ ಮಾಡಿದ್ದೇನೆ ಎಂದು ಆರೋಪ ಮಾಡಿರಲಿಲ್ಲವೇ. ನನ್ನ ಮೇಲೆ ತನಿಖೆ ಮಾಡಿಸಿಲ್ಲವೇ? ಅವರ ಜತೆ ಸರ್ಕಾರ ಮಾಡಿದ್ದೇವೆ ಎಂದು ನಾವು ಸುಮ್ಮನೆ ಇದ್ದೇವೆ. ಅವರು ಮರ್ಯಾದೆಯಾಗಿ ಇದ್ದರೆ ಕ್ಷೇಮ" ಎಂದು ಹರಿಹಾಯ್ದರು.

ನಮ್ಮ ಜಿಲ್ಲೆಯ ಜನರಿಗೆ ಒಳ್ಳೆಯದು ಬಯಸೋದು ತಪ್ಪಾ?
"ರಾಮನಗರ ಜಿಲ್ಲೆ ಮರುನಾಮಕರಣ ಮಾಡಬಾರದು ಎಂದು ಕೇಂದ್ರಕ್ಕೆ ಒತ್ತಡ ಹಾಕಿದ್ದಾರೆ. ನಮಗೂ ಕಾನೂನು ಗೊತ್ತಿದೆ. ಸಂವಿಧಾನದಲ್ಲಿ ನಾವು ಯಾರನ್ನೂ ಕೇಳುವ ಅಗತ್ಯವಿಲ್ಲ. ನಾವು ಮಾಹಿತಿ ನೀಡಬೇಕು ಎಂದು ಹೇಳಿ ಪ್ರಸ್ತಾವನೆ ಕಳುಹಿಸಿದ್ದೇವೆ. ದೆಹಲಿಯಲ್ಲಿರುವ ಕೆಲ ಮಂತ್ರಿಗಳು ಈ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ. ನಾವು ಅದಕ್ಕೆಲ್ಲ ಜಗ್ಗುವುದಿಲ್ಲ. ಜಿಲ್ಲೆ ಮರುನಾಮಕರಣ ಮಾಡುವುದು ಹೇಗೆ, ಜಿಲ್ಲೆಯನ್ನು ಹೇಗೆ ಬದಲಾಯಿಸಬೇಕು ಎಂದು ಗೊತ್ತಿದೆ, ನಾವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುತ್ತೇವೆ" ಎಂದು ತಿಳಿಸಿದರು.  

"ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಈ ಮರುನಾಮಕರಣ ಮಾಡಲಾಗುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, "ಹೌದೌದು, ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಮಾಡುತ್ತಿದ್ದೇವೆ. ನಮ್ಮ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಜನರಿಗೆ ಅನುಕೂಲ ಆಗಬಾರದೆ? ನೀವು ಅಲ್ಲಿಂದ ಇಲ್ಲಿಗೆ ಯಾಕೆ ಬಂದಿರಿ? ನಮ್ಮ ಜನ ಬೆಂಗಳೂರು ಜಿಲ್ಲೆಯವರು. ಅವರು ಬದುಕಬೇಕು. ನಮ್ಮ ಜಿಲ್ಲೆಯ ಜನರ ಆಸ್ತಿ ಹೋಗಿದೆ. ಅವರಿಗೆ ಒಳ್ಳೆಯದಾಗಲಿ ಎಂಬ ಆಸೆ ನಮ್ಮದು. ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.

ಪೆನ್ನಾರ್ ನದಿ: ಸಂಧಾನ ಸಭೆ ಮುಂದೂಡಿಕೆ
ಕೇಂದ್ರ ಜಲ ಸಚಿವರ ಭೇಟಿ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, "ಪೆನ್ನಾರ್ ನದಿ ನೀರಿನ ವಿಚಾರವಾಗಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರವು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಧಾನ ಸೂತ್ರ ಸಭೆ ನಡೆಸಲು 2-3 ದಿನಾಂಕ ನೀಡಿತ್ತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಾವು ದಿನಾಂಕ ಮರುನಿಗದಿಗೆ  ಮನವಿ ಮಾಡಿದ್ದೆ. ಈಗ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವರದಿ ನೀಡಬೇಕಿರುವ ಕಾರಣ ಮಾ. 18ರಂದು ಸಭೆ ಮಾಡಲು ಆಹ್ವಾನ ನೀಡಿದ್ದರು. ಕೊನೆ ಗಳಿಗೆಯಲ್ಲಿ ನಾವು ಪ್ರತ್ಯೇಕವಾಗಿ ನಮ್ಮ ಪ್ರಸ್ತಾವನೆ ಮುಂದಿಡುತ್ತೇವೆ. ಕರ್ನಾಟಕದ ಮುಂದೆ ಕೂತು ಚರ್ಚೆ ಮಾಡುವುದಿಲ್ಲ ಎಂದು ಹೇಳಿತು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸಭೆಯನ್ನು ಮುಂದೂಡಿದ್ದೇವೆ ಎಂದು ಸಚಿವರು ಕರೆ ಮಾಡಿ ಅಧಿಕೃತವಾಗಿ ತಿಳಿಸಿದ್ದಾರೆ. ತಮಿಳುನಾಡಿನ ಜೊತೆ ಪ್ರತ್ಯೇಕವಾಗಿ ಕೇಂದ್ರ ಸಚಿವರು ಮಾತನಾಡಲಿದ್ದಾರೆ. ಅವರು ತಮ್ಮ ರಾಜಕೀಯ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿರಬಹುದು. ನಾನು ಈ ಸಭೆಗೆ ಹೋಗುವ ಮುನ್ನ ಸಚಿವ ಸಂಪುಟದಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ಸರ್ಕಾರದ ನಿಲುವು ತಿಳಿಸಿದ್ದೆ" ಎಂದರು.

ಶಂಕುಸ್ಥಾಪನೆಗೆ ಆಹ್ವಾನ
ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, "ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಶಂಕುಸ್ಥಾಪನೆಗಾಗಿ ದಿನಾಂಕ ನೀಡುವಂತೆ ನಮ್ಮ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇನೆ. ರೇಸ್ ಕೋರ್ಸ್ ರಸ್ತೆಯಲ್ಲಿನ ಕಚೇರಿ ಸೇರಿದಂತೆ ಬೆಂಗಳೂರಿನಲ್ಲಿ  ಒಟ್ಟು 3 ಕಡೆ ಶಂಕುಸ್ಥಾಪನೆ ನೆರವೇರಲಿದೆ. ಬೆಂಗಳೂರಿನ ಕಚೇರಿಗಳನ್ನು ಖುದ್ದಾಗಿ ಶಂಕುಸ್ಥಾಪನೆ ಮಾಡಲಾಗುವುದು, ಉಳಿದ ಕಡೆಗಳ ಕಚೇರಿಯನ್ನು ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಾಗುವುದು. ಸಂಸತ್ ಅಧಿವೇಶನ ಮುಕ್ತಾಯದ ನಂತರ ದಿನಾಂಕ ನೀಡುವುದಾಗಿ ತಿಳಿಸಿದ್ದಾರೆ" ಎಂದು ಹೇಳಿದರು.

ನನ್ಮ ಆತ್ಮೀಯರನ್ನು ನಾನು ಏನು ಬೇಕಾದರೂ ಕರೆಯುವೆ:
ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ಮಂಡ್ಯ ಭಾಗದ ಕೆಲವು ನಾಯಕರನ್ನು ಛತ್ರಿ ಎಂದು ಕರೆದಿರುವುದನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅಧಿಕಾರದ ಮದ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, "ನನಗೆ ಮದ ಏರಿದ್ದರೆ, ಇಳಿಸಲಿ. ನನಗೆ ಬೇಕಾದವರನ್ನು ನಾನು ಪ್ರೀತಿಯಿಂದ ಏನು ಬೇಕಾದರೂ ಕರೆಯುತ್ತೇನೆ. ಅದರಲ್ಲಿ ಇವರದೇನೂ? ಕೆಲವರು ತಮ್ಮ ಆಪ್ತರನ್ನು ಕಳ್ಳ ನನ್ನ ಮಗನೆ... ಅಂತ ಅನ್ನೋದು ಸೇರಿದಂತೆ ಇನ್ನು ಹಲವು ರೀತಿಯಲ್ಲಿ ಕರೆಯುತ್ತಾರೆ. ಅದು ನಮ್ಮ ಮತ್ತು ಅವರ ನಡುವಣ ಬಾಂಧವ್ಯದ ವಿಚಾರ. ಯಾವ ಛತ್ರಿನೂ ಇಲ್ಲ, ಏನೂ ಇಲ್ಲ" ಎಂದು ಸ್ಪಷ್ಟನೆ ನೀಡಿದರು.

ಪಕ್ಷದ ತೀರ್ಮಾನಕ್ಕೆ ಬದ್ಧ:
ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಿಟ್ಟುಕೊಡುವ ವಿಚಾರ ಪ್ರಸ್ತಾಪಿಸಿದ್ದೀರಿ ಎಂದು ಕೇಳಿದಾಗ, "ಈ ವಿಚಾರವಾಗಿ ಪಕ್ಷ ತೀರ್ಮಾನ ಮಾಡಲಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನಾನು ಸೇರಿದಂತೆ ಇಲ್ಲಿ ಯಾರೂ ಶಾಶ್ವತವಲ್ಲ. ನನ್ನ ಕಾಲಾವಧಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ನಾವು ಬೇರೆ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪಕ್ಷ ಯಾವಾಗ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧವಾಗಿದ್ದೇವೆ. ಅದು ಇವತ್ತೋ, ನಾಳೆಯೋ, ಐದು ವರ್ಷಗಳ ನಂತರವೋ, 10 ವರ್ಷಗಳ ನಂತರವೋ ಗೊತ್ತಿಲ್ಲ. ಪಕ್ಷಕ್ಕೆ ಹೇಗೆ ನ್ಯಾಯ ಒದಗಿಸಿಕೊಡಬಹುದೋ ನಾನು ನನ್ನ ಪ್ರಯತ್ನ ಮಾಡಿದ್ದೇನೆ. ನಾನು ಯಾವುದೇ ಆತುರದಲ್ಲಿ ಇಲ್ಲ. ಪಕ್ಷದ ತೀರ್ಮಾನದಂತೆ ನಡೆಯುವೆ" ಎಂದು ತಿಳಿಸಿದರು.

ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸಬೇಕು:
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿರುವ ಬಗ್ಗೆ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ ಎಂದು ಕೇಳಿದಾಗ, "ಸಮಾಜದ ಎಲ್ಲಾ ವರ್ಗದವರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ನಾವು ಎಲ್ಲರನ್ನು ಸಮಾನವಾಗಿ ನೋಡುತ್ತೇವೆ. ಶೋಷಿತ ಸಮುದಾಯಗಳ ಜತೆ ಕಾಂಗ್ರೆಸ್ ಸರ್ಕಾರ ಕೈ ಜೋಡಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಿದೆ" ಎಂದರು.

ಪೊಲೀಸರಿಗೆ ದೂರು ನೀಡಲಿ
ಸಚಿವರ ಹನಿ ಟ್ರ್ಯಾಪ್ ವಿಚಾರದ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಇದರ ಬಗ್ಗೆ ತನಿಖೆ ಮಾಡಿಸೋಣ" ಎಂದರು.

ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬ ಮುನಿರತ್ನ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, "ಸ್ಪೀಕರ್ ಅವರ ಜತೆ ಮಾತನಾಡಿ ಅವರಿಗೆ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಗೋರಂಟಿ ಅಲ್ಲ.. ಮೊಸರಿಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 2 ನಿಮಿಷದಲ್ಲೇ ಕಪ್ಪಾಗುವುದು!

ವಿದ್ಯುತ್ ದರ 36 ಪೈಸೆ ಏರಿಕೆ ಬಗ್ಗೆ ಕೇಳಿದಾಗ, "ನನಗೆ ಈ ವಿಚಾರ ಗೊತ್ತಿಲ್ಲ. ಇಂಧನ ಸಚಿವರ ಬಳಿ ಮಾತನಾಡುತ್ತೇನೆ" ಎಂದು ತಿಳಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News