ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಗಳಿಗೆ ಡಿಸಿಎಂ ಅಶ್ವಥನಾರಾಯಣ್ ತರಾಟೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಬೇಕು- ಡಾ. ಸಿ.ಎನ್. ಅಶ್ವತ್ಥನಾರಾಯಣ

Updated: Aug 8, 2020 , 02:20 PM IST
ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಗಳಿಗೆ  ಡಿಸಿಎಂ ಅಶ್ವಥನಾರಾಯಣ್ ತರಾಟೆ

ಬೆಂಗಳೂರು: ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ನಿಮಿತ್ತ ವಿಧಾನಸೌಧ ಬಳಿ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಇಷ್ಟು ದಿನ ಕೋವಿಡ್ ಇಟ್ಟುಕೊಂಡು ಟೀಕಿಸಿದರು. ಈಗ ನೆರೆ-ಪ್ರವಾಹ ಸಿಕ್ಕಿದೆ. ಒಟ್ಟಿನಲ್ಲಿ ಯಾವುದಾದರೊಂದು ವಿಷಯ ಇಟ್ಟುಕೊಂಡು ಸರಕಾರವನ್ನು ’ವಿರೋಧ’ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಬೇಕು. ಹೊಣೆಗಾರಿಕೆಯಿಂದ ಕೆಲಸ ಮಾಡಿ ಲೋಪವಿದ್ದರೆ ತೋರಿಸಬೇಕು ಎಂದು ಡಿಸಿಎಂ ಹೇಳಿದರು.

ಯಡಿಯೂರಪ್ಪ ನಾಯಕತ್ವ ಕೊಂಡಾಡಿದ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ

ಕೋವಿಡ್ ನಂತರ ಬಂದಿರುವ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಸಮರ್ಥವಾಗಿ ಎದುರಿಸುತ್ತಿದೆ. ಅಪಾಯದ ಸ್ಥಳಗಳಿಂದ  ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಂತ್ರಸ್ಥರಿಗೆ 10 ಸಾವಿರ ರೂ. ಹಾಗೂ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು ಕೊಡಲಾಗುವುದು. ಕಳೆದ ವರ್ಷ ಉತ್ತಕ ಕರ್ನಾಟಕ ಪ್ರದೇಶದ ನೆರೆ ಸಂತ್ರಸ್ಥರಿಗೆ ನೆರವಾದ ರೀತಿಯಲ್ಲೇ ಸಕಲ ರೀತಿಯ ಸಹಾಯ ಹಸ್ತ ಚಾಚಲಾಗುವುದು. ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಉಳಿದಂತೆ ಪ್ರವಾಹ (Flood) ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಸಂಕಷ್ಟಕ್ಕೆ ಈಡಾಗಿರುವ ಎಲ್ಲ ಜಿಲ್ಲೆಗಳಿಗೂ ಅಗತ್ಯ ಸಂಪನ್ಮೂಲಗಳನ್ನು, ಸಾಮಗ್ರಿಗಳನ್ನು ಒದಗಿಸಲಾಗಿದೆ. ಜತೆಗೆ, ವೈದ್ಯಕೀಯ ನೆರವನ್ನು ನೀಡಲಾಗಿದೆ. ಎಷ್ಟು ರೀತಿಯಲ್ಲಿ ನೆರೆ ಸಂತ್ರಸ್ಥರಿಗೆ ನೆರವಾಗಬೇಕೋ ಅಷ್ಟೆಲ್ಲ ರೀತಿಯಲ್ಲಿ ಸಹಾಯ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್ ವಾರಿಯರ್ಸ್’ಗೆ ಕಿವಿಮಾತು:
ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ವೈರಾಣುವನ್ನು ಹತ್ತಿಕ್ಕಲು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪಾತ್ರ ದೊಡ್ಡದು. ಹೀಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವವರು ಕೂಡಲೇ ಹಾಜರಾಗಬೇಕು. ರಾಜ್ಯವೇ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೀಗೆ ಕರ್ತವ್ಯದಿಂದ ಪಲಾಯನ ಮಾಡುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ತಮಗೆ ವಹಿಸಿರುವ ಕೆಲಸವನ್ನು ಮಾಡಲೇಬೇಕು. ಅವರಿಗೆ ಅಗತ್ಯವಾಗಿ ಬೇಕಿರುವ ಎಲ್ಲ ಸುರಕ್ಷತಾ ಸಾಧನಗಳನ್ನು ಈಗಾಗಲೇ ಸರಕಾರ ಒದಗಿಸಿದೆ. ಜತೆಗೆ ಕೋವಿಡ್ ಭತ್ಯೆ, ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವುದು ನಮ್ಮ ಧ್ಯೇಯವಾಕ್ಯ. ಇದಕ್ಕೆ ಮನ್ನಣೆ ಕೊಟ್ಟು ಕೋಡಲೇ ಗೈರಾದವರೆಲ್ಲರೂ ಕೆಲಸಕ್ಕೆ ಹಾಜರಾಗಬೇಕು. ತಪ್ಪಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.