43 ಸಂಸ್ಕೃತ ಶಾಲೆಗಳಿಗೆ ಅನುದಾನ ನೀಡಲು ನಿರ್ಧಾರ: DCM ಡಾ. ಅಶ್ವತ್ಥನಾರಾಯಣ

ರಾಜ್ಯದಲ್ಲಿರುವ 43 ಸಂಸ್ಕೃತ ಶಾಲೆಗಳಿಗೆ ಸದ್ಯ ಸರ್ಕಾರದಿಂದ ಅನುದಾನ ನೀಡುತ್ತಿಲ್ಲ. ಆದರೆ, ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದರು.

Last Updated : Feb 17, 2020, 06:02 AM IST
43 ಸಂಸ್ಕೃತ ಶಾಲೆಗಳಿಗೆ ಅನುದಾನ ನೀಡಲು ನಿರ್ಧಾರ: DCM ಡಾ. ಅಶ್ವತ್ಥನಾರಾಯಣ title=

ಬೆಂಗಳೂರು: ರಾಜ್ಯದಲ್ಲಿರುವ 43 ಸಂಸ್ಕೃತ ಶಾಲೆಗಳಿಗೆ ಅನುದಾನ ನೀಡುವ ಸಂಬಂಧ ನಮ್ಮ ಸರ್ಕಾರ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದರು.

ನಗರದ ಬೇಗೂರು ಬ್ರಾಹ್ಮಣ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.  "ರಾಜ್ಯದಲ್ಲಿರುವ 43 ಸಂಸ್ಕೃತ ಶಾಲೆಗಳಿಗೆ ಸದ್ಯ ಸರ್ಕಾರದಿಂದ ಅನುದಾನ ನೀಡುತ್ತಿಲ್ಲ. ಆದರೆ, ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯೂ ಎಲ್ಲ43 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಫಾರಸು ಸಲ್ಲಿಸಿದೆ. ಇದನ್ನು ಪರಿಗಣಿಸಿ ಅನುದಾನ ನೀಡುವ ಬಗ್ಗೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ," ಎಂದು ಅವರು ವಿವರಿಸಿದರು. 

"ಸಮಾಜದಲ್ಲಿ ಯುಗ ಯುಗಗಳಿಂದ  ನಿರಂತರವಾಗಿ ವೇದಾಭ್ಯಾಸ ನಡೆಯುತ್ತಿದ್ದು, ಕಾರ್ಯಕ್ಕೆ ಮತ್ತಷ್ಟು ಶಕ್ತಿ ತುಂಬವ ಕೆಲಸ ಆಗಬೇಕು. ನಾಡಿನ ಜನ ಕೊಟ್ಟಿರುವ ಈ  ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ಕಣ್ಣಿಗೆ ಕಾಣುವ ಅಭಿವೃದ್ಧಿಯಾದರೆ ಮಾತ್ರ ಸಾಲದು,  ಸಾಂಸ್ಕೃತಿಕ ಹಾಗೂ ಆಧ್ಯಾತ್ಮಕವಾಗಿಯೂ ಶಕ್ತಿ ತುಂಬಬೇಕು. ಅದಕ್ಕೆ ಒಳ ಶಕ್ತಿ, ಒಳ ಅರಿವು ಬೇಕು. ವ್ಯಕ್ತಿತ್ವದಲ್ಲಿ ಉತ್ತಮ ಚಿಂತನೆ ಇಲ್ಲವಾದರೆ ಯಾವ ಅಭಿವೃದ್ಧಿ ಕಾರ್ಯವೂ ಸಾರ್ಥಕವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯ ಇದೆ.  ಬೇಗೂರಿನಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯ ನಡೆಯುತ್ತಿದ್ದು ಇದರ ಜತೆಗೆ, ವೇದಾಭ್ಯಾಸ ನಡೆಸಲು  ಸಹಕಾರ ನೀಡಲಾಗುವುದು,"ಎಂದು ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ, "ಬೇಗೂರು ಬ್ರಾಹ್ಮಣ ಸಂಘದ ಅಭಿವೃದ್ಧಿಗೆ ಎಂ. ಕೃಷ್ಣಪ್ಪ ಅವರು ಶಾಸಕರ ನಿಧಿಯಿಂದ 50 ಲಕ್ಷ ರೂ. ಹಣ ನೀಡುವುದಾಗಿ ಷೋಷಿಸಿದ್ದಾರೆ," ಎಂದು ಅವರು  ತಿಳಿಸಿದರು.

ನನ್ನ ಜಾತಿ ಗೊತ್ತಿಲ್ಲದೇ ಗೆಲ್ಲಿಸಿದ್ದಾರೆ!
"ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬ್ರಾಹ್ಮಣರೇ ಬಹುಸಂಖ್ಯಾತರು. ನಮ್ಮ ಮಲ್ಲೇಶ್ವರದ ಬ್ರಾಹ್ಮಣರು ನನ್ನ ಕೈ ಹಿಡಿದು, ಬೆಳೆಸಿದ್ದಾರೆ. ಇಂದು ನಾನು ಈ ಸ್ಥಾನಕ್ಕೆ ಬರಲು ಕಾರಣಕರ್ತರವರು. ವ್ಯಕ್ತಿ ನೋಡಿ ಮತ ಹಾಕಿ ಗೆಲ್ಲಿಸಿದ್ದಾರೆ.  ನಾನು ಯಾವ ಜಾತಿಯವ ಎಂದು ಕ್ಷೇತ್ರದ ಜನರಿಗೆ ಗೊತ್ತೇ ಇರಲಿಲ್ಲ. ಇವತ್ತಿಗೂ ಅದೇ ಪ್ರೀತಿ-ವಿಶ್ವಾಸದಿಂದ ನನ್ನ ಜತೆ ಇದ್ದಾರೆ, ಅವರ ಆಶೀರ್ವಾದ ನನಗಿದೆ," ಎಂದರು.

ಅನಂತ ಸ್ಮರಣೆ:
"ನಾನು ಹೆಚ್ಚು ದಿನ ಬೆಂಗಳೂರಿನಲ್ಲಿ ಇರಲಿಲ್ಲ, ಶಿಕ್ಷಣಕ್ಕಾಗಿ ಶಿವಮೊಗ್ಗ, ಮಂಗಳೂರಿನಲ್ಲಿದ್ದೆ.  ವೈದ್ಯ ವೃತ್ತಿಯಲ್ಲಿದ್ದವನಿಗೆ ರಾಜಕೀಯ ಪ್ರವೇಶಿಸಿ, ಇಲ್ಲೇ ಬೇರೂರುವುದು ಸುಲಭವಾಗಿರಲಿಲ್ಲ. ನಮ್ಮ ನಾಯಕರಾದ ದಿವಂಗತ ಅನಂತಕುಮಾರ್‌ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟರು. ನಾನು ಮೊದಲ ಬಾರಿಗೆ ಶಾಸಕನಾದೆ.  ಇಂದು ನಮ್ಮ ಸರ್ಕಾರ ಇದ್ದು, ಅನಂತಕುಮಾರ್ ಅವರ ಹೆಸರಿನಲ್ಲಿ ಒಳ್ಳೆಯ ಯೋಜನೆ ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈ ವಿಷಯವನ್ನು ಅಧಿಕೃತವಾಗಿ ಘೋಷಿಸುವರು," ಎಂದು ಅವರು ಹೇಳಿದರು.

ಎಲ್ಲ ವಿವಿಗಳಲ್ಲಿ ಸಂಸ್ಕೃತ ಕೇಂದ್ರ :
"ವೇದ, ಉಪನಿಷತ್‌, ಸಂಸ್ಕೃತ ಭಾಷೆ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಸ್ಥಾಪನೆ ಆಗಲಿದ್ದು, ಈ ಸಂಬಂಧ ಎಲ್ಲ ತಜ್ಞರ ಸಲಹೆ ಪಡೆದುಕೊಳ್ಳಲಾಗಿದೆ.  ಉತ್ತಮ ಹಾಗೂ ಪ್ರಸ್ತುತವಾದ ಸಂಸ್ಕೃತ ವಿಶ್ವವಿದ್ಯಾಲಯ ಒಂದು ಕಡೆ ಸ್ಥಾಪನೆಯಾದರೂ, ಎಲ್ಲ ವಿವಿಗಳಲ್ಲಿ ಅದರ ಕೇಂದ್ರ ಆರಂಭಿಸುತ್ತೇವೆ.  ಲೌಕಿಕ ಶಿಕ್ಷಣದ ಜತೆ  ವೇದಾಭ್ಯಾಸಕ್ಕೆ ಅವಕಾಶ ಮಾಡಿಕೊಡುವಂಥ ಯೋಜನೆ ರೂಪಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಈ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇವೆ," ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಶಾಸಕರಾದ ಸತೀಶ್ ರೆಡ್ಡಿ,  ಎಂ.ಕೃಷ್ಣಪ್ಪ, ಉಪ ಮೇಯರ್ ಮೋಹನ್‌ರಾಜ್ ಹಾಗೂ  ಬೇಗೂರು ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ಮತ್ತಿತರರು ಉಪಸ್ಥಿತಿರಿದ್ದರು.

Trending News