ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ದರ್ಶನಕ್ಕೆ ರಾಜ್ಯಾದ್ಯಂತ ಭಕ್ತರ ದಂಡೇ ಹರಿದುಬರ್ತಿದೆ. ದರ್ಶನೋತ್ಸವದ ಏಳನೇ ದಿನವಾದ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಲ್ಲಿ ನಿಂತು ತಾಯಿಯ ದರ್ಶನವನ್ನು ಪಡೆದುಕೊಂಡ್ರು. ನಿರೀಕ್ಷೆಗೂ ಮೀರಿದ ಜನರು ಬಂದಿದ್ದರಿಂದ ಜನರನ್ನು ನಿಯಂತ್ರಿಸಲು ಒಂದು ಗಂಟೆಗೂ ಹೆಚ್ಚು ಕಾಲ 1000 ಹಾಗೂ 300 ರೂ ಟಿಕೆಟ್ ಬಂದ್ ಮಾಡಿದ್ದರು.
ಜಿಲ್ಲಾಡಳಿತ ಉತ್ತಮವಾಗಿ ವ್ಯವಸ್ಥೆ ಮಾಡಿದ್ದರಿಂದ ಹೆಚ್ಚು ಜನ ಬಂದರೂ ಯಾವುದೇ ತೊಂದರೆ ಆಗದಂತೆ ಜನರು ನಿಯಂತ್ರಿಸಿದರು. ಇನ್ನು ಹಾಸನಾಂಬೆ ದರ್ಶನಕ್ಕೆ ಇಂದು ಗಣ್ಯರ ದಂಡೇ ಹರಿದುಬಂತು. ಹಾಸನ ಸಂಸದ ಶ್ರೇಯಸ್ ಪಟೇಲ್ ಅವಳಿ ಮಕ್ಕಳೊಂದಿಗೆ ಕುಟುಂಬ ಸಮೇತ ದರ್ಶನ ಮಾಡಿದ್ರೆ, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಎಂ.ಕೆ.ಪ್ರಾಣೇಶ್, ದಾವಣಗೆರೆ ಎಂಪಿ ಪ್ರಭಾ ಮಲ್ಲಿಕಾರ್ಜುನ್, ಕೆ.ಆರ್.ಪೇಟೆ ಎಂಎಲ್ಎ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಇಂದು ತಾಯಿಯ ದರ್ಶನವನ್ನು ಪಡೆದುಕೊಂಡು, ವಿಶೇಷ ಪೂಜೆಯನ್ನು ನೆರವೇರಿಸಿದ್ರು.
ಇದನ್ನೂ ಓದಿ:ಭಾರತದ ಈ ಹಳ್ಳಿಯಲ್ಲಿ ವಿದೇಶಿಗರೇ ಹೆಚ್ಚು ವಾಸ ಮಾಡ್ತಾರೆ! ಭಾರತೀಯರು ಎಲ್ಲೋದ್ರು ಗೊತ್ತೆ?
ಕಳೆದ ಮೂರು ದಿನದಿಂದಲೂ ನಿರೀಕ್ಷೆಗೂ ಮೀರಿದ ಜನರು ಬರ್ತಿದ್ದು, ಏಳೇ ದಿನಕ್ಕೆ 11.30 ಲಕ್ಷ ಜನರು ಬಂದು ತಾಯಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. 1000 ಹಾಗೂ 300 ರೂ ಟಿಕೆಟ್ ನ ಸರತಿ ಸಾಲುಗಳೂ ಕೂಡಾ ತುಂಬಿದ್ದು, ಧರ್ಮದರ್ಶನದ ಸರತಿ ಸಾಲುಗಳು 10 ಕಿಮೀ ಕಿ.ಮೀ.ಗೂ ಹೆಚ್ಚು ದೂರ ತಲುಪಿದೆ. ಧರ್ಮದರ್ಶನದ ಸರತಿಸಾಲು ಆರಂಭದಲ್ಲಿ 2 ಗಂಟೆಗೆ ದರ್ಶನ ಆಗುತ್ತಿದ್ದು, ಕಳೆದ ಮೂರು ದಿನಗಳಿಂದ ಐದುಗಂಟೆಗೂ ಹೆಚ್ಚು ಆಗ್ತಿದೆ.ಉಳಿದಿರೋ ದಿನಗಳಲ್ಲಿಯೂ ಇದೇ ಪ್ರಮಾಣದಲ್ಲಿ ಜನರು ಬರೋ ಸಾಧ್ಯತೆಯಿದ್ದು, ಸಂಸದ ಶ್ರೇಯಸ್ ಪಟೇಲ್ ಕೂಡಾ ಎಲ್ಲರಿಗೂ ದರ್ಶನ ಆಗುತ್ತದೆ ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇವೆಲ್ಲದರ ನಡುವೆ ಇಂದು ಜಿಲ್ಲಾಡಳಿತಕ್ಕೆ ಶಿಷ್ಟಾಚಾರದ ಸಂಕಷ್ಟ ಎದುರಾಗಿತ್ತು, ಶಿಷ್ಟಾಚಾರದಲ್ಲಿ ಬಂದ ಎಲ್ಲರೂ ಗರ್ಭಗುಡಿ ಪ್ರವೇಶಕ್ಕೆ ಮುಂದಾಗ್ತಿದ್ದು, ಇದು ಸಾರ್ವಜನಿಕರ ದರ್ಶನಕ್ಕೆ ಅಡ್ಡಿಯಾಗ್ತಿದೆ. ಹಾಗಾಗಿ ಉಳಿದಿರುವ ದಿನಗಳಲ್ಲಿಯಾದ್ರೂ ಗರ್ಭಗುಡಿ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎನ್ನೋ ಮಾತುಗಳು ಕೇಳಿ ಬರ್ತಿವೆ.









