)
ದೇಶ ಅಲ್ಲದೇ ವಿದೇಶದಲ್ಲೂ ಭಾರೀ ಸುದ್ದಿಯಾಗ್ತಿರೋ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಚುರುಕುಗೊಳ್ತಾ ಇದ್ದಂತೆ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ. ಇಷ್ಟು ದಿನ ಬುರುಡೆ ಕಥೆ ಕೇಳಿ ಗುಂಡಿ ತೋಡಿಸಿದ್ದ ಎಸ್ಐಟಿ ಅಧಿಕಾರಿಗಳ ಶೆಡ್ಯೂಲ್ ಬ್ಯುಸಿಯಾಗಿಬಿಟ್ಟಿದೆ. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ಬರ್ತಿದ್ದು, ಹೀಗಾಗಿ ಪ್ರಕರಣ ರೋಚಕ ಹಾದಿಯಲ್ಲಿದೆ.
ಅಂದಹಾಗೇ ಇಂದು ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ರು. ಕಳೆದ ಕೆಲದಿನಗಳಿಂದ ಗಿರೀಶ್ ಮಟ್ಟಣ್ಣನವರ್ ಅವರ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನು ಜಯಂತ್ ಟಿ ಅವರು ಮಾಧ್ಯಮಗಳನ್ನ ತಪ್ಪಿಸಲು ಒಳದಾರಿಯಲ್ಲಿ ಬಂದು ಎಸ್.ಐ.ಟಿ ಕಚೇರಿ ತಲುಪಿದ್ರು. ಇಂದು ವಿಚಾರಣೆಗಾಗಿ ವಿಠಲ್ ಗೌಡ ಅವರಿಗೂ ಬರಲು ಎಸ್.ಐ.ಟಿ ತಂಡ ಸೂಚನೆ ನೀಡಿತ್ತು.
ಸದ್ಯ ನೇತ್ರಾವತಿ ಸ್ನಾನಘಟ್ಟದ ಬಂಗ್ಲೆ ಗುಡ್ಡೆ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಧರ್ಮಸ್ಥಳ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿಗೆ ಬುರುಡೆ ಕಥೆ ಹಿಂದಿನ ಸ್ಫೋಟಕ ಮಾಹಿತಿಗಳೇ ಸಿಗುತ್ತಿವೆ. ಸೌಜನ್ಯ ಮಾವ ವಿಠ್ಠಲ್ ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಅಂತಾ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್, ಎಸ್ಐಟಿ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿರೋದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.
ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಸೌಜನ್ಯಾ ಮಾವ ವಿಠಲ ಗೌಡ ಹಾಗೂ ಪ್ರದೀಪ್ ಗೌಡ ಎಂಬವರನ್ನು ಕರೆದೊಯ್ದು ಬಂಗ್ಲೆಗುಡ್ಡೆ ಅರಣ್ಯದಲ್ಲಿ ಎಸ್ಐಟಿ ತಂಡ ಸ್ಥಳ ಪರಿಶೀಲನೆ ನಡೆಸಿತ್ತು. ಈ ವೇಳೆ ಇಲ್ಲಿಂದ ಹಲವು ವಸ್ತುಗಳನ್ನು ಶೇಖರಿಸಿ ಬಕೆಟ್ನಲ್ಲಿ ತಂದಿರುವುದಾಗಿ ತಿಳಿದು ಬಂದಿದೆ. ಇಲ್ಲಿ ವಿಠಲ ಗೌಡ ತೋರಿಸಿದ ಜಾಗದಲ್ಲಿ ಯಾವುದೋ ಅವಶೇಷಗಳು ಲಭಿಸಿದೆಯೋ ಅಥವಾ ಮಣ್ಣಿನ ಮಾದರಿಯನ್ನು ತಂದಿದ್ದಾರೆಯೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಎಸ್ಐಟಿ ತಂಡ ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಂಡದೊಂದಿಗೆ ಇದ್ದು ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಇನ್ನು ದೂರುದಾರ ತಂದಿದ್ದ ಬುರುಡೆಯ ಹಿನ್ನೆಲೆ ಕೆದಕುತ್ತಿರುವ ಎಸ್ ಐಟಿಯು ಕೇರಳದ ನಂಟು ಇರೋದನ್ನು ಪತ್ತೆಹಚ್ಚಿತು. ಹೀಗಾಗಿ ಕೇರಳದ ಯುಟ್ಯೂಬರ್ ಮನಾಫ್ಗೆ ವಿಚಾರಣೆಗೆ ಬರುವಂತೆ ನೋಟೀಸ್ ಕೂಡ ನೀಡಿತ್ತು. ಹೀಗಾಗಿ ಹಬ್ಬ ಮುಗ್ಸಿ ಮನಾಫ್ ಇಂದು ಮಧ್ಯಾಹ್ನ ಎಸ್.ಐ.ಟಿ ಕಚೇರಿಗೆ ಒಳದಾರಿಯ ಮೂಲಕ ತೆರಳಿದ್ರು. ತಲೆಬುರುಡೆಯನ್ನು ತೆಗೆಯುತ್ತಿರುವ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಹಾಕಿದ್ದ ಮನಾಫ್ ಇನ್ನೂ ಹಲವು ವಿಡಿಯೋ ಗಳನ್ನು ಪೋಸ್ಟ್ ಮಾಡಿದ್ರು. ಈ ಹಿನ್ನಲೆಯಲ್ಲಿ ಈತನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ.ಟಿ ನೋಟೀಸ್ ನೀಡಿತ್ತು. ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಎಸ್ ಐಟಿ ಮುಂದೆ ನೀಡಿದ್ದಾರೆ ಎನ್ನಲಾಗಿದೆ.
ಸದ್ಯ SIT ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.. ಬುರುಡೆ ರಹಸ್ಯ ಕೂಡ ಆಲ್ಮೊಸ್ಟ್ ಹೊರಗೆ ಬಂದಿದ್ದು ಬಹಿರಂಗ ಹೇಳಿಕೆ ಬಾಕಿ ಇದ್ದಂತೆ ಕಾಣಿಸ್ತಿದೆ. ಆದ್ರೆ ಈ ಷಡ್ಯಂತ್ರದ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡಿರೋದು ಮೇಲ್ನೋಟಕ್ಕೆ ಕಾಣಿಸುತ್ತಿರುವುದು ಸತ್ಯ