)
ಮಂಗಳೂರು : ತಾನು ಹಲವು ಮೃತದೇಹಗಳನ್ನು ವಿಲೇವಾರಿ ಮಾಡಿದ್ದೆ ಎಂದು ವ್ಯಕ್ತಿಯೊಬ್ಬರು ವಕೀಲರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಬಹಳ ಪ್ರಾಮುಖ್ಯತೆ ಪಡೆದಿದೆ. ಸತ್ಯದ ಹುಡುಕಾಟಕ್ಕೆ ಬಲವಾದ ಸಾಕ್ಷಿ ದೊರೆಯುವ ಲಕ್ಷಣಗಳು ಕಂಡು ಬರ್ತಿದೆ. ಈ ಸಂಬಂಧ ಸಮಗ್ರ ತನಿಖೆಗೆ ಎಸ್ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಡಿಜಿಪಿ ಪ್ರಣವ ಮೊಹಂತಿ ನೇತೃತ್ವದಲ್ಲಿ ಮೂರು ಸದಸ್ಯರ ಎಸ್ಐಟಿ ರಚನೆ ಮಾಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಎನ್.ಎಂ.ಅನುಚೇತ್, ಸೌಮ್ಯಲತ, ಜಿತೇಂದ್ರ ಕುಮಾರ್ ದಯಾಮ ಈ ಎಸ್ಐಟಿ ತಂಡದಲ್ಲಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ / ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಹಾಗೂ ಐಜಿಪಿ ಅವರು ಈ ವಿಶೇಷ ತನಿಖಾ ತಂಡಕ್ಕೆ ಅಂದ್ರೆ Special Investigation Team ಗೆ ವರ್ಗಾಯಿಸಲು ಆದೇಶಿಸಲಾಗಿದೆ.
ಈ ವಿಶೇಷ ತನಿಖಾ ತಂಡವು ತನಿಖೆಗೆ ಸಂಬಂಧಿಸಿದ ತನಿಖಾ ಪ್ರಗತಿಯನ್ನು ಆಗಿಂದಾಗ ಡಿಜಿ ಮತ್ತು ಐಜಿಪಿ ಅವರಿಗೆ ವರದಿ ಮಾಡಬೇಕು. ವಿಶೇಷ ತನಿಖಾ ತಂಡವು ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಪೊಲೀಸ್ ಮಹಾ ನಿರ್ದೇಶಕರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಪತ್ರ ಬರೆದು ಧರ್ಮಸ್ಥಳದ ಸುತ್ತಮುತ್ತ ಹಲವು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳು ವ್ಯಕ್ತಿಯೊಬ್ಬರು ತಲೆಬುರುಡೆ ದೊರಕಿದ ಬಗ್ಗೆ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆಯ ವರದಿ ಪ್ರಸಾರವಾಗಿರುವುದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಈ ಮಾಧ್ಯಮ ವರದಿ ಮತ್ತು ಶವಗಳನ್ನು ಹೂತಿರುವ ವ್ಯಕ್ತಿಯ ಹೇಳಿಕೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷ ಹಲವು ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕವಾದ ಸಾವು ಮತ್ತು ನಾಪತ್ತೆ ಪ್ರಕರಣಗಳು ನಡೆದಿರುವ ಬಗ್ಗೆ ತಿಳಿಸಲಾಗಿದೆ. ಹಾಗಾಗಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಾಪತ್ತೆಯಾಗಿರುವ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು/ಕೊಲೆ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಮಹಿಳಾ ಆಯೋಗದ ಆಧ್ಯಕ್ಷರು ಕೋರಿದ್ದರು.
ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡ, ಧರ್ಮಸ್ಥಳದಲ್ಲಿ ಶವಗಳನ್ನು ವಿಲೇವಾರಿ ಮಾಡಿದ ಪ್ರಕರಣ ಸಂಬಂಧ ಸಾಕ್ಷಿಗಳಿಗೆ ರಾಜ್ಯ ಸರ್ಕಾರ ತಕ್ಷಣವೇ ಭದ್ರತೆ ಒದಗಿಸಬೇಕು. ಜೊತೆಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಹಿರಿಯ ವಕೀಲರಾದ ಬಾಲನ್ ಮತ್ತು ಸಿ.ಎಸ್.ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಈ ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಸಲ್ಲಿಸಿದ್ದರು. ಒಟ್ನಲ್ಲಿ ನಿಗೂಢವಾಗಿದ್ದ ಸತ್ಯವೊಂದು ಬಯಲಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ.