)
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಶೋಧ ಕಾರ್ಯ ನಾಲ್ಕನೇ ದಿನವಾದ ಇಂದು ಕೂಡಾ ಮುಂದುವರೆಯಿತು. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 6ನೇ ಗುಂಡಿಯಲ್ಲಿ 12 ಮೂಳೆಗಳು ಪತ್ತೆಯಾಗಿದ್ದವು. ಹೀಗಾಗಿ ಇಂದು ಏಳು ಮತ್ತು 8 ನೇ ಗುಂಡಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಧರ್ಮಸ್ಥಳದ ಸುತ್ತಮುತ್ತ ಅಸಹಜ ಸಾವು ಆರೋಪ ಪ್ರಕರಣದ ಕುರಿತಾದ ಎಸ್ ಐಟಿ ತನಿಖೆ ಮುಂದುವರೆದಿದೆ. ಶುಕ್ರವಾರ ಅಂದರೆ ಇಂದು ನೇತ್ರಾವತಿ ಸ್ನಾನಘಟ್ಟದಲ್ಲಿ ಅಗೆದ 7,8 ನೇ ಸ್ಥಳದಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಇಲ್ಲಿ ಕಾರ್ಯಾಚರಣೆ ನಡೆಸಿ ಹುಡುಕಿದರೂ ಯಾವುದೇ ಅವಶೇಷಗಳು ಕಂಡುಬರಲಿಲ್ಲ ಎಂದು ತಿಳಿದು ಬಂದಿದೆ.
ಉತ್ಖನನ ಕಾರ್ಯದ ಮೂರನೇ ದಿನವಾದ ಆ.1 ರಂದು 11:30ಗಂಟೆಗೆ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದಿದ್ದರು. ಪೌರಕಾರ್ಮಿಕರಿಂದ ಮತ್ತು ಮಿನಿ ಜೆಸಿಬಿಯಿಂದ 7 ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಒಂದು ಸ್ಥಳದಲ್ಲಿ 12 ಮೂಳೆಗಳು ಸಿಕ್ಕಿದ್ದು ಬಿಟ್ಟರೆ ನಂತರದ ಕಾರ್ಯಾಚರಣೆಯಲ್ಲಿ ಏನೂ ಪತ್ತೆಯಾಗಿಲ್ಲ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಂಜೆ ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಆಗಮಿಸಿ 1995 ರಿಂದ 2014ರ ವರೆಗಿನ ಯುಡಿಆರ್ (ಅಸಹಜ ಸಾವು) ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.