)
ಧರ್ಮಸ್ಥಳದ ಸುತ್ತಮುತ್ತ ಅನೇಕ ಮೃತದೇಹಗಳನ್ನು ಹೂಳಲಾಗಿದೆ ಎಂಬ ಪ್ರಕರಣ ಬಹಳ ಕುತೂಹಲ ಮೂಡಿಸಿದೆ. ಅವಶೇಷಗಳ ಹುಡುಕಾಟದಲ್ಲಿಂದು ಏನೇನಾಯ್ತು? ಇಲ್ಲಿದೆ ಫುಲ್ ಡಿಟೈಲ್ಸ್
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ಅನೇಕ ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಂಡಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಇಂದು ಕೊನೆಗೊಂಡಿದ್ದು ಯಾವುದೇ ಕಳೇಬರ ದೊರೆತಿಲ್ಲ. ಎಸ್.ಐ.ಟಿ. ಮುಖ್ಯಸ್ಥ ಡಾ. ಪ್ರಣವ್ ಮೊಹಾಂತಿ, ಅವರು ಸ್ಥಳಕ್ಕೆ ಭೇಟಿ ಮಾರ್ಗದರ್ಶನ ನೀಡಿದ್ದಾರೆ. ತನಿಖಾಧಿಕಾರಿಗಳಾದ ಅನುಚೇತ್, ಎಸ್ಪಿ ಸಿ.ಎ.ಸೈಮನ್ ಜತೆಗಿದ್ದು ಕಾರ್ಯಾಚರಣೆ ಮುಗಿದ ಬಳಿಕ ಅನಾಮಿಕನನ್ನು ಎಸ್.ಐ.ಟಿ. ಕಚೇರಿಗೆ ಕರೆದೊಯ್ಯಲಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ 3ನೇ ಗುರುತು ಮಾಡಿದ ಸ್ಥಳದಲ್ಲಿ ಎಸ್.ಐ.ಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಯಾವುದೇ ಕಳೇಬರಗಳು ಸಿಗಲಿಲ್ಲ. ಇದೇ ವೇಳೆ 4ನೇ ಗುರುತು ಮಾಡಿದ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದರೂ ಯಾವುದೇ ಕಳೆಬರಹ ಸಿಗಲಿಲ್ಲ. ಇಂದು ಬೆಳಗ್ಗೆ ಎರಡನೇ ಗುರುತು ಮಾಡಿದ ಸ್ಥಳದಲ್ಲಿ 11:30 ರಿಂದ 2:30 ಯವರೆಗೆ ನಡೆದ ಸ್ಥಳ ಅಗೆಯುವಿಕೆ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಯಾವುದೇ ಕುರುಹು ಸಿಗಲಿಲ್ಲ.
ಇನ್ನು ಜುಲೈ 31 ಕ್ಕೆ 6ನೇ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ. ಈ ಮಧ್ಯೆ ಅನಾಮಿಕ ಪರ ನ್ಯಾಯವಾದಿ, ಮಂಜುನಾಥ್ ಎನ್. ಎಂಬವರು ಹೆಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಕಾರ್ಡ್ ಸಿಕ್ಕಿದೆ ಎಂಬ ಹೇಳಿಕೆ ನೀಡಿದ್ದಾರೆ.
ಸೋಮವಾರ ಸ್ಥಳ ಮಹಜರು ಬಳಿಕ ನಿನ್ನೆ, ಇಂದು ಸಮಾಧಿ ಹುಡುಕುವ ಪ್ರಯತ್ನದಲ್ಲಿ ಯಾವುದೇ ಅವಶೇಷಗಳು ಅಧಿಕೃತವಾಗಿ ಲಭಿಸಿಲ್ಲ. ಹೀಗಾಗಿ ಗುರುವಾರದ ಕಾರ್ಯಾಚರಣೆ ಬಹಳ ಕುತೂಹಲ ಮೂಡಿಸಿದೆ.