)
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಈಗಾಗಲೇ ಬಿಜೆಪಿ ನಾಯಕರು ರೋಡಿಗಿಳಿದು ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದಾರೆ. ಈ ಬೆನ್ನಲ್ಲೇ ಜೆಡಿಎಸ್ ನಾಯಕರು ಕೂಡಾ ಧರ್ಮಸ್ಥಳಕ್ಕೆ ಯಾತ್ರೆ ಹಮ್ಮಿಕೊಂಡಿದ್ದಾರೆ. ಧರ್ಮಸ್ಥಳದ ಭಕ್ತರು ಕೂಡಾ ಈ ಯಾತ್ರೆಗೆ ಸಾಥ್ ಕೊಟ್ಟಿದ್ದಾರೆ. ಮಾಜಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಯಾತ್ರೆ ಆರಂಭವಾಗಿದೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯ :
ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಹಾಗೂ ವಿರೇಂದ್ರ ಹೆಗ್ಗಡೆ ಅವರಿಗೆ ಆತ್ಮಸ್ಥೈರ್ಯ ತುಂಬಲು ಮಂಡ್ಯದಿಂದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಧರ್ಮಸ್ಥಳದ ಭಕ್ತರು ಇಂದು ಧರ್ಮಸ್ಥಳ ಯಾತ್ರೆಯನ್ನು ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಬಳಿಯಿಂದ ನೂರಾರು ಮಂದಿ ಕಾರುಗಳ ಮೂಲಕ ಈ ಯಾತ್ರೆಯನ್ನು ಆರಂಭಿಸಿದರು. ಈ ಯಾತ್ರೆಯ ನೇತೃತ್ವವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಹಿಸಿಕೊಂಡಿದ್ದಾರೆ. ಧರ್ಮಸ್ಥಳಕ್ಕೆ ಹಾಗೂ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಮಾಡುವ ದೃಷ್ಟಿಯಿಂದ ಹಲವು ಷಡ್ಯಂತ್ರಗಳು ನಡೆಯುತ್ತಿವೆ. ಸದ್ಯ ದುಷ್ಟರು ಹೂಡಿದ್ದ ಷಡ್ಯಂತ್ರಗಳು ಮಂಜುನಾಥಸ್ವಾಮಿಯಿಂದ ಭಸ್ಮವಾಗಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮೂಲಕ ರಾಜ್ಯದ ಹಲವು ಕೆರೆಗಳು ಹಾಗೂ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಜೊತೆಗೆ ರಾಜ್ಯದ ಲಕ್ಷಾಂತರ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ದಾರಿ ದೀಪವಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಇನ್ನು ಹೀಗಿರುವಾಗ ಈ ಸಮಯದಲ್ಲಿ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಜೊತೆ ನಿಲ್ಲಬೇಕಿರುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ನಾವು ಮಂಡ್ಯದಿಂದ ರ್ಯಾಲಿ ಮೂಲಕ ಆತ್ಮಸ್ಥೈರ್ಯ ತುಂಬಲು ನಾವು ಕೂಡ ಹೋಗುತ್ತಿದ್ದೇವೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಒಟ್ಟಿನಲ್ಲಿ ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿರುದ್ಧ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದೆ.ಯಾವಾಗ ಆ ಮಾಸ್ಕ್ ಮ್ಯಾನ್ ಬಂಧನವಾಯ್ತು ಆಗ್ಲಿಂದ ಒಂದೊಂದೆ ವಿಚಾರ ಕೂಡ ರಿವೀಲ್ ಆಗ್ತಿದೆ.ಧರ್ಮಸ್ಥಳ ಹಾಗೂ ವಿರೇಂದ್ರ ಹೆಗಡೆ ಪರ ನಾವಿದ್ದೇವೆ ಎಂಬ ಕೂಗು ಕೂಡ ಹೆಚ್ಚಾಗ್ತಿದೆ.