)
Dharwad Police: ಸಮುದಾಯದಲ್ಲಿ ಜನಸ್ನೇಹಿ ಪೊಲೀಸ್ ಪರಿಕಲ್ಪನೆ ದೃಷ್ಟಿಯಿಂದ ರಾಜ್ಯ ಸರ್ಕಾರ ನೂತನ ವ್ಯವಸ್ಥೆ ಜಾರಿಗೊಳಿಸಿದೆ. ಹೀಗಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಮನೆಗೆ ತೆರಳಿ ಪೊಲೀಸ್ ಕುರಿತು ಮಾಹಿತಿ ನೀಡಿದರು.
ಮನೆ ಮನೆಗೆ ತೆರಳಿ ಜನರೊಂದಿಗೆ ಮಾತನಾಡುತ್ತಿರೋ ಪೊಲೀಸ್ ಅಧಿಕಾರಿಗಳು, ಅವರಿಗೆ ವಿವಿಧ ಮಾಹಿತಿಯುಳ್ಳ ಕರಪತ್ರಗಳನ್ನು ನೀಡುತ್ತಿರೋ ಪೊಲೀಸ್ ಸಿಬ್ಬಂದಿ, ಅವರೊಂದಿಗೆ ಮುಕ್ತವಾಗಿ ಚರ್ಚಿಸುತ್ತಿರೋ ಮಕ್ಕಳು ಹಾಗೂ ಸಾರ್ವಜನಿಕರು - ಇಂಥದ್ದೊಂದು ಕಾರ್ಯಕ್ರಮಕ್ಕೆ ಇಂದು ಸಾಕ್ಷಿಯಾಗಿದ್ದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ. ಹೌದು, ರಾಜ್ಯದಲ್ಲಿಯೇ ಅತಿ ದೊಡ್ಡ ಗ್ರಾಮ ಪಂಚಾಯತ್ ಹೊಂದಿರೋ ಗ್ರಾಮ ಎಂಬ ಖ್ಯಾತಿಗೆ ಒಳಗಾಗಿರೋ ಇಲ್ಲಿ ಇಂದು ಸರ್ಕಾರದ ಮನೆ ಮನೆಗೆ ಪೊಲೀಸರು ಅನ್ನೋ ನೂತನ ಕಾರ್ಯಕ್ರಮ ನಡೆಯಿತು. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಕ್ಕೆ ಭೇಟಿ ನೀಡಿದ ಎಸ್ಪಿ ಗುಂಜನ್ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೇದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಜನರ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಪೊಲೀಸರ ಬಗೆಗಿನ ಕರಪತ್ರಗಳನ್ನು ನೀಡಿ, ಯಾವುದೇ ಕಾರಣಕ್ಕೂ ತಾವು ಸಾರ್ವಜನಿಕರೊಂದಿಗೆ ಇರೋದಾಗಿ ಭರವಸೆ ನೀಡಿದರು. ಸಾಮಾನ್ಯವಾಗಿ ಪೊಲೀಸರೆಂದರೆ ಇಂದಿಗೂ ಜನರಲ್ಲಿ ಭಯದ ಭಾವನೆ ಇದೆ. ಆದ್ದರಿಂದ ಅದನ್ನು ಹೋಗಲಾಡಿಸಲು ಹೊಸ ಕಾರ್ಯಕ್ರಮದ ಮೂಲಕ ಅರಿವು ಮೂಡಿಲಾಯಿತು.
ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚಾರ ನಡೆಸಿದ ಪೊಲೀಸರು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರನ್ನು ಅವರವರ ಮನೆಯಲ್ಲಿಯೇ ಭೇಟಿಯಾಗಿ ಅನೇಕ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಇನ್ನು ಬಳಿಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಗ್ರಾಮದ ಮುಖಂಡರು ತಮ್ಮ ಗ್ರಾಮದ ಸಮಸ್ಯೆಗಳನ್ನು ಎಸ್ಪಿ ಮುಂದೆ ಹೇಳಿಕೊಂಡರು. ಇದಕ್ಕೆ ಪರಿಹಾರವನ್ನು ಕೊಡಿಸುವಂತೆಯೂ ಮನವಿ ಮಾಡಿಕೊಂಡರು. ಅಲ್ಲದೇ ಇದೇ ಮೊದಲ ಬಾರಿಗೆ ಎಸ್ಪಿಯಂಥ ಅಧಿಕಾರಿಯೊಬ್ಬರು ಗ್ರಾಮದಲ್ಲಿನ ವಿವಿಧ ಮನೆಗಳಿಗೆ ಸ್ವತಃ ಹೋಗಿದ್ದು ಗ್ರಾಮಸ್ಥರಿಗೆ ಸಂತಸವನ್ನು ತಂದಿದೆ.
ಈಗಾಗಲೇ ಇಂಥ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರಗಳು ಜಾರಿಗೆ ತರುತ್ತಲೇ ಬಂದಿವೆ. ಆದರೂ ಜನರು ಪೊಲೀಸರಿಂದ ದೂರವೇ ಇರುತ್ತಾರೆ. ಅದರಲ್ಲೂ ತಮಗೆ ಅನ್ಯಾಯವಾದಾಗಲೂ ಪೊಲೀಸರ ಬಳಿ ಹೋಗಲು ಹೆದರಿ, ಅನ್ಯಾಯವನ್ನು ಸಹಿಸಿಕೊಳ್ಳುತ್ತಾ ಬಂದಿದ್ದಾರೆ. ಇದರಿಂದಾಗಿ ದೌರ್ಜನ್ಯ ಎಸಗೋರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಬೇಕೆಂದರೆ ಪೊಲೀಸರು ಜನ ಸ್ನೇಹಿಯಾಗೋದರ ಜೊತೆಗೆ ಜನರು ಕೂಡ ಪೊಲೀಸರೊಂದಿಗೆ ಸಂವಹನ ಇಟ್ಟುಕೊಳ್ಳಬೇಕಿದೆ. ಅಂದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಬರೋದಲ್ಲದೇ ಉಪಯೋಗವೂ ಆಗುತ್ತದೆ. ಒಟ್ಟಿನಲ್ಲಿ ಈ ಮನೆ ಮನೆಗೆ ಪೊಲೀಸರು ಅನ್ನೋ ವಿಶೇಷ ಕಾರ್ಯಕ್ರಮ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರೋ ಅನೇಕ ಅಪಾರ್ಥಗಳಿಗೆ ತಡೆ ಹಾಕುವಲ್ಲಿ ಸಹಕಾರಿಯಾಗೋದಂತೂ ಸತ್ಯ.