ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ನಾನು ಖರ್ಗೆ ಅವರ ಬಳಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕೇವಲ ಪಕ್ಷದ ನೂತನ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸಲು ಮನವಿ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ತಡೆಕಟ್ಟಾಗಿ ಪ್ರತಿಕ್ರಿಯಿಸಿದರು. 'ದೆಹಲಿಗೆ ಹೋದಾಗೆಲ್ಲ ನಮ್ಮ ನಾಯಕರನ್ನು ಭೇಟಿಯಾಗುತ್ತೇನೆ. ಆದರೆ ಈ ಬಾರಿ ರಾಜಕೀಯ ವಿಚಾರಗಳೇ ಚರ್ಚೆಯಾಗಲಿಲ್ಲ. ಖರ್ಗೆ ಅವರು ಬಿಹಾರ ಚುನಾವಣೆಯಲ್ಲಿ ಬಿಡುವಿಲ್ಲದೇ ಇದ್ದ ಕಾರಣ ತೊಂದರೆ ಕೊಡದೇ ಇದ್ದೆ. ಡಿಸೆಂಬರ್ 1ರಿಂದ ಸಂಸತ್ ಅಧಿವೇಶನ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಉದ್ಘಾಟನೆಯ ದಿನಾಂಕಕ್ಕೆ ಮಾತ್ರ ಒತ್ತು ನೀಡಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ತೆರಿಗೆದಾರರಿಗೆ ದೊಡ್ಡ ಬದಲಾವಣೆ: ಐಟಿಆರ್ ರೀಫಂಡ್ ಬಗ್ಗೆ ಐಟಿ ಇಲಾಖೆಯ ಮಹತ್ವದ ನಿರ್ಧಾರ
ಮೇಕೆದಾಟು ಯೋಜನೆಗೆ ತಡೆಯಿಲ್ಲ: ಯಾವುದೇ ಸಮಯ ವ್ಯರ್ಥ ಮಾಡುವುದಿಲ್ಲ:
ದೆಹಲಿ ಭೇಟಿ ಫಲಪ್ರದವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, 'ನಾನು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ. ಮೇಕೆದಾಟು ಯೋಜನೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರನ್ನು ಭೇಟಿಯಾಗಿ ಅಭಿನಂದಿಸಿದೆ. ನ್ಯಾಯಾಲಯದ ಆದೇಶದಂತೆ ಕೇಂದ್ರ ಜಲ ಆಯೋಗಕ್ಕೆ ಅನುಮತಿ ನೀಡುವ ಅಧಿಕಾರ ಇದ್ದು, ಕಾಲಮಿತಿ ಇರುವುದರಿಂದ ತಡೆಯಾಡುವ ಸಾಧ್ಯತೆಯಿಲ್ಲ" ಎಂದು ಸ್ಪಷ್ಟಪಡಿಸಿದರು.
ನಾಳೆ ಕಾವೇರಿ ನೀರವರಿ ನಿಗಮದ (CNNL) ಸಭೆಯಲ್ಲಿ ಯೋಜನೆಯ ಪ್ರಸ್ತಾಪನೆಯ ರೂಪುರೇಷೆ ಚರ್ಚಿಸಲಾಗುವುದು.ಈ ವಿಚಾರದಲ್ಲಿ ಇನ್ನೊಂದು ಕ್ಷಣವೂ ವ್ಯರ್ಥ ಮಾಡುವುದಿಲ್ಲ.ಸಿಎಂ ಸಿದ್ದರಾಮಯ್ಯ ಕೂಡ ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ' ಎಂದು ತಿಳಿಸಿದ ಅವರು, ಕೃಷ್ಣಾ ಮತ್ತು ಮಹದಾಯಿ ಯೋಜನೆಗಳ ಬಗ್ಗೆಯೂ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದಾಗಿ ಹೇಳಿದರು.‘ನಮ್ಮ ನೀರು ನಮ್ಮ ಹಕ್ಕು’ ಎಂಬ ಪಾದಯಾತ್ರೆಯಲ್ಲಿ ನೂರಾರು ಕಿಲೋಮೀಟರ್ ನಡೆದಿದ್ದೇವೆ, ಅನೇಕ ಪ್ರಕರಣಗಳು ದಾಖಲಾಗಿವೆ.ಈ ಯೋಜನೆಯಿಂದ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ ನೀರು ಒದಗಿಸಲು ಸಾಧ್ಯವಾಗಲಿದೆ. ನನ್ನ ಶ್ರಮಕ್ಕೆ ಈಗ ಫಲ ಬರುತ್ತಿದೆ' ಎಂದು ಭಾವುಕರಾದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್‌ಶಾಕ್! ತಂಡದಿಂದ ಕ್ಯಾಪ್ಟನ್ ಶುಭಮನ್ ಗಿಲ್ ಔಟ್
ಸಂಪುಟ ಪುನಾರಚನೆ ಅಥವಾ ನಾಯಕತ್ವ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ನಗುಮೊಗದಲ್ಲಿ ಉತ್ತರಿಸಿದ ಡಿ.ಕೆ.ಶಿ.'ಯಾರಾದರೂ ಗಿಣಿ ಶಾಸ್ತ್ರ ಹೇಳುವವರ ಬಳಿ ಹೋಗಿ ಕೇಳಿ' ಎಂದು ತಮಾಷೆಯಾಗಿ ಹೇಳಿ ತಪ್ಪಿಸಿಕೊಂಡರು.ಶಾಸಕರು ಸಚಿವ ಸ್ಥಾನಕ್ಕೆ ಆಸೆಪಡುತ್ತಿದ್ದಾರೆ ಎಂಬ ಪ್ರಶ್ನೆಗೆ, 'ಅದರಲ್ಲಿ ತಪ್ಪೇನಿದೆ? ಪಕ್ಷಕ್ಕೆ ದುಡಿದವರಿಗೆ, ತ್ಯಾಗ ಮಾಡಿದವರಿಗೆ ಸಚಿವ ಸ್ಥಾನದ ಬಯಕೆ ಇರುವುದು ಸಹಜ.ಆ ನಿರ್ಧಾರದ ಅಧಿಕಾರ ಮುಖ್ಯಮಂತ್ರಿಗಳದ್ದು' ಎಂದು ಬೆಂಬಲ ವ್ಯಕ್ತಪಡಿಸಿದರು.









