ದೆಹಲಿ ಹೈಕೋರ್ಟಿನಲ್ಲಿ ಇಂದು ಡಿಕೆಶಿ ಬೇಲ್ ಅರ್ಜಿ ವಿಚಾರಣೆ

ದೆಹಲಿ ಹೈಕೋರ್ಟಿನ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠ ಮಧ್ಯಾಹ್ನ 3.30ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು ಜಾರಿ ನಿರ್ದೇಶನಾಲಯದ ವಕೀಲರು ವಾದ ಮಂಡನೆ ಮಾಡಲಿದ್ದಾರೆ.

Last Updated : Oct 17, 2019, 05:31 AM IST
ದೆಹಲಿ ಹೈಕೋರ್ಟಿನಲ್ಲಿ ಇಂದು ಡಿಕೆಶಿ ಬೇಲ್ ಅರ್ಜಿ ವಿಚಾರಣೆ title=
File image

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು‌ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಜಾಮೀನು ಅರ್ಜಿಯನ್ನು ರದ್ದುಗೊಳಿಸಿರುವ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿರುವ ಅರ್ಜಿಯನ್ನು ಇಂದು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ದೆಹಲಿ ಹೈಕೋರ್ಟಿನ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠ ಮಧ್ಯಾಹ್ನ 3.30ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು ಜಾರಿ ನಿರ್ದೇಶನಾಲಯದ ವಕೀಲರು ವಾದ ಮಂಡನೆ ಮಾಡಲಿದ್ದಾರೆ. ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ನೇತೃತ್ವದ ತಂಡ ವಾದ ಮಂಡನೆ ಮಾಡಲಿದೆ.

ಜಾರಿ ನಿರ್ದೇಶನಾಲಯದ ಪರ ವಕೀಲರು ಡಿ.ಕೆ.‌ ಶಿವಕುಮಾರ್ ಅವರ ಈ ಪ್ರಕರಣ ಪಿಎಂಎಲ್ಎ ವ್ಯಾಪ್ತಿಗೆ ಬರಲಿದೆ. ಅವರ ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ‌ ನಿರ್ದೇಶನಾಲಯಕ್ಕೆ ಸ್ಪಷ್ಟ ಮಾಹಿತಿ ಇದೆ. ಅವರು ಅಕ್ರಮವಾಗಿ ಸಂಪಾದಿಸಿದ ಹಣದಿಂದ ಆಸ್ತಿ ಖರೀದಿ ಮಾಡಿದ್ದಾರೆ. ಆದರೆ ಯಾವುದೇ ಆಸ್ತಿ ಖರೀದಿಗೆ ಬಳಸಿದ ಹಣಕ್ಕ ಆದಾಯದ ಮೂಲ ತಿಳಿಸಿಲ್ಲ. ಅವರ ಕುಟುಂಬ ವರ್ಗದವರು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.   ಅವರು ಇಡಿ ವಿಚಾರಣೆಗೆ ಸರಿಯಾಗಿ ಸ್ಪಂದಿಸಿಲ್ಲ. ಇದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ವಿಚಾರಣೆ ನಡೆಸುವುದು ಬಾಕಿ ಇದೆ. ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ನೀಡಿದರೆ ಅವರು ಜೈಲಿನಿಂದ ಹೊರ ಬಂದ ಬಳಿಕ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಆದುದರಿಂದ ಈ  ಹಂತದಲ್ಲಿ ಅವರಿಗೆ ಜಾಮೀನು ನೀಡುವುದು ಸಮಂಜಸವಾಗುವುದಿಲ್ಲ ಎಂದು ವಾದ ಮಾಡುವ ಸಾಧ್ಯತೆ ಇದೆ.

ಮಂಗಳವಾರವೇ ಡಿ.ಕೆ. ಶಿವಕುಮಾರ್ ಪರ ವಕೀಲರ ವಾದ ಮಂಡನೆ ಮುಕ್ತಾಯವಾಗಿರುವುದರಿಂದ ಇಂದು ಜಾರಿ ನಿರ್ದೇಶನಾಲಯದ ವಕೀಲರು ವಾದ ಮಾಡಿದ ಬಳಿಕ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ. ತೀರ್ಪು ನಾಳೆ ಅಥವಾ ಮುಂದಿನ ಸೋಮವಾರ ಪ್ರಕಟವಾಗುವ ಸಾಧ್ಯತೆ ಇದೆ.

Trending News