)
Yadgir district: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮೇಲಿನಗಡ್ಡಿ ಗ್ರಾಮದ ಸಮೀಪ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ 111 ಕುರಿಗಳು ಸಿಲುಕಿದ ಘಟನೆ ನಿನ್ನೆ ನಡೆದಿದ್ದು, ಸ್ಥಳೀಯ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡ ಪರಿಣಾಮ ಕುರಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಕೋಟಿ ಮ್ಯಾಳಿ ಹಾಗೂ ಬಂಗಿ ಮ್ಯಾಳಿ ನಡುಗಡ್ಡೆ ಪ್ರದೇಶದಲ್ಲಿ ಮೇಯಲು ಕರೆದೊಯ್ಯಲಾದ ಕುರಿಗಳು ಅಚಾನಕ್ ನದಿ ನೀರಿನ ಮಟ್ಟ ಏರಿಕೆಯಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿಕೊಂಡವು. ಪ್ರತ್ಯೇಕವಾಗಿ 9 ಕುರಿಗಾಹಿಗಳಿಗೆ ಸೇರಿದ ಈ ಕುರಿಗಳನ್ನು ಹೊರತೆಗೆದುವುದು ಕುರಿಗಾಯಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ನದಿ ನೀರಿನ ಹರಿವು ಹೆಚ್ಚಾದ ಕಾರಣ ಕುರಿಗಳನ್ನು ತಕ್ಷಣ ಹೊರತೆಗೆಯಲು ಸಾಧ್ಯವಾಗದೆ ಆತಂಕದ ವಾತಾವರಣ ನಿರ್ಮಾಣವಾಯಿತು.
ಸ್ಥಳೀಯ ತಹಶೀಲ್ದಾರರವರ ಮಧ್ಯಸ್ಥಿಕೆಯಲ್ಲಿ ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದ ನೀರನ್ನು ಸುಮಾರು ಒಂದು ಗಂಟೆಗಳ ಕಾಲ ನಿಲ್ಲಿಸಲಾಯಿತು. ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಕುರಿಗಳ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡು ಎಲ್ಲಾ ಕುರಿಗಳನ್ನು ಸುರಕ್ಷಿತವಾಗಿ ತೀರಕ್ಕೆ ತಲುಪಿಸಲಾಯಿತು.
ಕುರಿಗಳು ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಹಿನ್ನೆಲೆಯಲ್ಲಿ ಕುರಿಗಾಹಿಗಳು ತಹಶೀಲ್ದಾರರು ಹಾಗೂ ಸ್ಥಳೀಯ ಆಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಘಟನೆ ಕುರಿಗಾಯಿಗಳಲ್ಲಿ ಆತಂಕ ಮೂಡಿಸಿದರೂ, ತಕ್ಷಣದ ನಿರ್ಧಾರ ಹಾಗೂ ಅಧಿಕಾರಿಗಳ ಸಹಕಾರದಿಂದ ದುರಂತ ತಪ್ಪಿದೆ.