ನಿನ್ನೆ ಮುಂಜಾನೆ 6.30ಕ್ಕೆ ಶಾಂತಿನಗರ ಶಾಸಕ ಹ್ಯಾರೀಸ್ ಹಾಗೂ ನಲಪಾಡ್ ನಿವಾಸಕ್ಕೆ ಎಂಟ್ರಿ ಕೊಟ್ಟ 14 ಅಧಿಕಾರಿಗಳ ತಂಡ, ಸತತ 21 ಗಂಟೆಗಳ ಕಾಲ ಜಾಲಾಡಿದೆ.ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಮೂರು ಕಾರುಗಳಲ್ಲಿ ಅಧಿಕಾರಿಗಳು ತೆರಳಿದ್ದಾರೆ

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಇಡಿ ದಾಳಿಯದ್ದೇ ಸದ್ದು, ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಸುದೀರ್ಘ 21 ಗಂಟೆಗಳ ಶೋಧ ಕಾರ್ಯ ಮುಕ್ತಾಯವಾಗಿದೆ.ದಾಳಿಯ ವೇಳೆ ಲಕ್ಷಾಂತರ ರೂಪಾಯಿ ನಗದು ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇತ್ತ ಈ ದಾಳಿಯ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಶಾಸಕರ ಪುತ್ರ ನಲಪಾಡ್ ಹಾಗೂ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.ಈ ಕುರಿತಾದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ನಿನ್ನೆ ಮುಂಜಾನೆ 6.30ಕ್ಕೆ ಶಾಂತಿನಗರ ಶಾಸಕ ಹ್ಯಾರೀಸ್ ಹಾಗೂ ನಲಪಾಡ್ ನಿವಾಸಕ್ಕೆ ಎಂಟ್ರಿ ಕೊಟ್ಟ 14 ಅಧಿಕಾರಿಗಳ ತಂಡ, ಸತತ 21 ಗಂಟೆಗಳ ಕಾಲ ಜಾಲಾಡಿದೆ.ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಮೂರು ಕಾರುಗಳಲ್ಲಿ ಅಧಿಕಾರಿಗಳು ತೆರಳಿದ್ದಾರೆ.ಈ ಶೋಧ ಕಾರ್ಯದ ವೇಳೆ ವಿದೇಶಿ ವ್ಯವಹಾರಕ್ಕೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳು,ಹಾರ್ಡ್ ಡಿಸ್ಕ್ ಹಾಗೂ ಡಿಜಿಟಲ್ ಡಾಕ್ಯುಮೆಂಟ್ಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಅಷ್ಟೇ ಅಲ್ಲದೆ, ದಾಳಿಯ ವೇಳೆ ಬರೋಬ್ಬರಿ 37 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು,ಅದನ್ನು ಜಪ್ತಿ ಮಾಡಲಾಗಿದೆ ಮೂಲಗಳು ತಿಳಿಸಿವೆ. ವಿಚಾರಣೆಗೆ ಕರೆದಾಗ ಹಾಜರಾಗುವಂತೆ ನಲಪಾಡ್ ಹಾಗೂ ಸಹೋದರರಿಗೆ ಸೂಚನೆ ನೀಡಿ ಅಧಿಕಾರಿಗಳು ತೆರಳಿದ್ದಾರೆ.
ತಂದೆಗೆ ಸಚಿವ ಸ್ಥಾನ ತಪ್ಪಿಸಲು ರಾಜಕೀಯ ಷಡ್ಯಂತ್ರ ಮಾಡಿದ್ದಾರೆ:
ದಾಳಿಯ ಬಳಿಕ ಮಾಧ್ಯಮಗಳ ಮುಂದೆ ಬಂದ ಮೊಹಮ್ಮದ್ ನಲಪಾಡ್ ಆಕ್ರೋಶ ಹೊರಹಾಕಿದ್ದಾರೆ.ಇದು ನನ್ನ ಮತ್ತು ನನ್ನ ತಮ್ಮನ ಮೇಲಿನ ಆರೋಪ, ಇದಕ್ಕೂ ತಂದೆ ಹ್ಯಾರಿಸ್ಗೂ ಸಂಬಂಧವಿಲ್ಲ. ಆದರೆ ನಮ್ಮ ತಂದೆಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.ಹ್ಯಾಕರ್ ಶ್ರೀಕಿ ಪರಿಚಯದ ಬಗ್ಗೆ ಮಾತನಾಡಿದ ನಲಪಾಡ್, ಶ್ರೀಕಿ ಪರಿಚಯ ಇರುವುದು ನಿಜ, ಒಟ್ಟಿಗೆ ಊಟ ಮಾಡಿದ್ದೇವೆ. ಆದರೆ ಆತನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ.ಯಾರೋ ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡಲಾಗುತ್ತಿದೆ.ರಾಜಕೀಯವಾಗಿ ಬೆಳೆಯುತ್ತಿರುವ ನನ್ನನ್ನು ತುಳಿಯಲು ಈ ಪ್ರಯತ್ನ ನಡೆಯುತ್ತಿದೆ.ನಾನು ನನ್ನ ತಂದೆಗೆ ಒಳ್ಳೆಯ ಮಗನಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಇತ್ತ ಶಾಸಕ ಹ್ಯಾರಿಸ್ ಪರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾಟಿಂಗ್ ಮಾಡಿದ್ದಾರೆ.ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ 2020ರ ಪ್ರಕರಣವನ್ನಿಟ್ಟುಕೊಂಡು ಈಗ ದಾಳಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಇಡಿಯವರಿಗೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರ ಕಾಣುತ್ತಾರಾ.ಬಿಜೆಪಿಯಲ್ಲಿ ಯಾರೂ ಸತ್ಯಹರಿಶ್ಚಂದ್ರರಿಲ್ಲ.ಇದು ಕೇವಲ ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಒಟ್ಟಿನಲ್ಲಿ ಶ್ರೀಕಿ ಹಗರಣದ ನಂಟು ಈಗ ಹ್ಯಾರಿಸ್ ಕುಟುಂಬಕ್ಕೆ ಉರುಳಾಗಿ ಪರಿಣಮಿಸಿದ್ದು, ಮುಂದಿನ ವಿಚಾರಣೆ ಕುತೂಹಲ ಮೂಡಿಸಿದೆ.