)
Fire Accident: ಹೊಟೇಲ್ ನಲ್ಲಿ ಬೆಂಕಿ ಬಿದ್ದು ಸಾಮಾಗ್ರಿಗಳು ಸುಟ್ಟು ಕರಕಲಾದ ಘಟನೆ ಗದಗ ನಗರದ ತಿಲಕ್ ಪಾರ್ಕ್ ಬಳಿ ಇರುವ ತ್ರಿವೇಣಿ ಹೊಟೇಲ್ ನಲ್ಲಿ ನಡೆದಿದೆ. ಹೊಟೆಲ್ ನಾಗೇಶ್ ಸವಡಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ ಎನ್ನಲಾಗುತ್ತಿದೆ.
ನಿನ್ನೆ(ಅ.22) ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ನಡೆದಿದೆ ಎನ್ನಲಾಗಿದೆ. ಇನ್ನು ಬೆಂಕಿ ಹೊತ್ತಿದ ಪರಿಣಾಮ ಹೊಟೇಲ್ ನ ಅಡುಗೆ ಸಾಮಾನು, ಪೀಠೋಪಕರಣ ಸೇರಿದಂತೆ ಎಲ್ಲವೂ ಸುಟ್ಟು ಭಸ್ಮವಾಗಿವೆ. ಒಂದು ಅಂತಸ್ತಿನ ಈ ಹೊಟೇಲ್ ಬಹುಭಾಗ ಬೆಂಕಿಗಾಹುತಿಯಾಗಿದೆ.
ಇನ್ನು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಹೊಟೇಲ್ ನಲ್ಲಿದ್ದ ಸಿಲಿಂಡರ್ ಹಾಗೂ ಪಕ್ಕದ ಅಂಗಡಿಗೆ ಬೆಂಕಿ ವ್ಯಾಪಿಸುವಷ್ಟರಲ್ಲಿ, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 10 ಲಕ್ಷಕ್ಕೂ ಹೆಚ್ಚು ಹಾನಿ:
ಈ ಅಗ್ನಿ ಅವಘಡದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗುತ್ತಿದೆ.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.