)
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ರಣಭೀಕರ ಮಳೆಗೆ ಬೆಳಗಾವಿ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲಾಡಳಿತವು ನದಿ ದಂಡೆಯ ಉದ್ದಕ್ಕೂ ಇರುವ ಹಳ್ಳಿಗಳ ಜನರಿಗೆ ಮುನ್ನೆಚ್ಚರಿಕೆ ನೀಡಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ತಂಡಗಳು ಜಾಗರೂಕವಾಗಿವೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ನಿಂದ 53 ಸಾವಿರ ಕ್ಯೂಸೆಕ್, ರಾಧಾನಗರಿ ಡ್ಯಾಂನಿಂದ 11 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಕೃಷ್ಣಾ ನದಿಗೆ ನೀರು ಬಿಟ್ಟ ಕಾರಣ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 10 ಕ್ಕೂ ಹೆಚ್ಚು ಸೇತುವೆಗಳು 5ನೇ ಬಾರಿ ಮುಳುಗಡೆಯಾಗಿವೆ.
ಬೆಳಗಾವಿಯ ಲೋಳಸೂರ ಸೇತುವೆ ಮುಳುಗಡೆ ಆಗಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಗೋಕಾಕ ಹೊರವಲಯದಲ್ಲಿ ನಿರ್ಮಿಸಿರುವ ಸೇತುವೆ ಜಲಾವೃತಗೊಂಡಿದೆ. ಸಂಕೇಶ್ವರ- ಸವದತ್ತಿ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಲೋಳಸೂರ ಸೇತುವೆ ಮುಳುಗಿದೆ. ಸಂಕೇಶ್ವರ ಹಾಗೂ ಸವದತ್ತಿ ಸಂಚಾರ ಸ್ಥಗಿತಗೊಂಡಿದೆ.
51ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಿಂದ 47,800 ಕ್ಯೂಸೆಕ್ ನಷ್ಟು ನೀರು ಹರಿ ಬಿಟ್ಟಿದ್ದಾರೆ. ಇದರಿಂದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಕೆಲ ಗ್ರಾಮಗಳು ಮುಳುಗಡೆ ಆಗುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಪ್ರವಾಸಿಗರ ಫೇವರೇಟ್ ಹುಲಿರಾಯನಿಗೆ ಗಾಯ
ಬೆಳಗಾವಿಯ ನವಿಲುತೀರ್ಥ ಡ್ಯಾಮ್ ಸಹ ಭರ್ತಿಯಾಗಿದೆ. ಈ ಹಿನ್ನೆಲೆ ಮಲಪ್ರಭ ನದಿಗೆ 13 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಮುನವಳ್ಳಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಬೆಳಗಾವಿಯಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗಿದೆ. ಯಳ್ಳೂರ, ಶಹಾಪುರ, ವಡಗಾವಿಯಲ್ಲಿ ನಾಲೆ ನೀರು ನುಗ್ಗಿ ಎಕರೆಗಟ್ಟಲೆ ಜಮೀನು ಕೆರೆಯಂತೆ ತುಂಬಿವೆ. ನಾಟಿ ಮಾಡಿರುವ ಭತ್ತದ ಬೆಳೆಗೆ ಹಾನಿ ಉಂಟಾಗಿದೆ.
ಕೊಪ್ಪಳದ ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದ ಆನೆಗೊಂದಿ ನವವೃಂದಾವನ ಸಂಪರ್ಕ ಕಡಿತಗೊಂಡಿದೆ. ಶ್ರೀಕೃಷ್ಣ ದೇವರಾಯ ಸಮಾಧಿ, ಸಾಲು ಮಂಟಪ ಸಹ ಮುಳುಗಡೆ ಹಂತಕ್ಕೆ ತಲುಪಿದೆ.
ಕೃಷ್ಣಾ ನದಿಗೆ ಯಾದಗಿರಿಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ 1 ಲಕ್ಷ 60 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದಾರೆ. ರಾಯಚೂರಿನ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ-ಹಂಚಿನಾಳ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ. ವರುಣಾರ್ಭಟಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದೆ.
ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಹೆಸರು, ಉದ್ದಿನ ಬೇಳೆ ಜಲಾವೃತಗೊಂಡಿದೆ. ಹುಬ್ಬಳ್ಳಿ, ಕುಂದಗೋಳ ತಾಲೂಕಿನಲ್ಲಿ ಈರುಳ್ಳಿ ಬೆಳೆಗೂ ಹಾನಿಯಾಗಿದೆ. ಬೀದರ್ ಜಿಲ್ಲೆಯಲ್ಲಿ ಕಟಾವಿಗೆ ಬಂದ ಹೆಸರು ಬೆಳೆ ಜಲಾವೃತವಾಗಿದೆ. ಹಾವೇರಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.