)
Ration Card News: ಕೇಂದ್ರ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವಂತೆ ಸೂಚನೆ ಬಂದಿರುವುದರಿಂದ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಮಾಡಿಸಿಕೊಂಡಿರುವ ಸುಮಾರು 12 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ತಯಾರಿ ನಡೆಸುತ್ತಿದೆ. ಈ ಬಗ್ಗೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಲು ಕೆಲವು ನಿಯಮಗಳಿಗೆ. ಆದರೆ ಜನ ಬಿಪಿಎಲ್ ಕಾರ್ಡಿನಿಂದ ಸಿಗುವ ಸೌಲಭ್ಯದ ಆಸೆಗೆ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಪಡಿತರ ಚೀಟಿ ಮಾಡಿಸಿಕೊಂಡಿರುವ ಸುಮಾರು 12 ಲಕ್ಷದಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಅಂಥ ಕಾರ್ಡುಗಳನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಅಕ್ರಮವಾಗಿ ಪಡೆದಿರುವ ಪಡಿತರ ಚೀಟಿಗಳನ್ನು ರದ್ದು ಮಾಡಲು ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಗತ್ಯ ತಯಾರಿ ನಡೆಸಿದೆ. ಸದ್ಯ ಪರಿಶೀಲನೆ ನಡೆಸುತ್ತಿದ್ದು ಕೆಲವೇ ದಿನಗಳಲ್ಲಿ ಸುಮಾರು 12 ಲಕ್ಷ ಅಕ್ರಮ ಅಥವಾ ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಒಟ್ಟು 1.5 ಕೋಟಿಗೂ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆ ಪೈಕಿ 12 ಲಕ್ಷ ಬಿಪಿಎಲ್ ಕಾರ್ಡುಗಳು ಅನರ್ಹ ಎಂದು ಪತ್ತೆ ಹಚ್ಚಲಾಗಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡು ಪಡೆದಿರುವುದು ತಿಳಿದುಬಂದಿದೆ. ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ ಸಂಖ್ಯೆ 57,864 ಎಂದು ತಿಳಿದುಬಂದಿದೆ.
BPL- Below Poverty line ಎಂಬ ಹೆಸರೇ ಹೇಳುವಂತೆ ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು. ಆದರೆ 25 ಲಕ್ಷ ರೂಪಾಯಿಗಿಂತಲೂ ಹೆಚ್ಚು ಜಿಎಸ್ಟಿ ವ್ಯವಹಾರ ನಡೆಸಿರುವ 2,684 ಕುಟುಂಬಗಳು, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವ 19.690 ಜನ, 7.5 ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿರುವ 33,456 ಜನ ಕೂಡ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. 6,16,196 ಜನ ಇ-ಕೆವೈಸಿ ಮಾಡಿಸಿಯೇ ಇಲ್ಲ ಎಂದು ಅರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಸಚಿವ ಕೆ.ಹೆಚ್. ಮುನಿಯಪ್ಪ ಏನಂದ್ರು?
ಬಿಪಿಎಲ್ ಕಾರ್ಡ್ ರದ್ದತಿಗೆ ಸಂಬಂಧಿಸಿದಂತೆ ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಕರ್ನಾಟಕದಲ್ಲಿ ಬರೋಬ್ಬರಿ 75% ಬಿಪಿಎಲ್ ಕಾರ್ಡ್ಗಳಿವೆ. ಹಾಗಾಗಿ, ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಮಾಡೋದು ಅನಿವಾರ್ಯ. ಈ ವೇಳೆ ಅನರ್ಹರು ಕಂಡು ಬಂದ್ರೆ ಕಾರ್ಡ್ ರದ್ದು ಮಾಡಲ್ಲ, ಬದಲಿಗೆ ಅವರನ್ನ ಎಪಿಎಲ್ ಕಾರ್ಡ್ಗೆ ಸೇರಿಸಲಾಗುತ್ತದೆ. ಅಪ್ಪಿತಪ್ಪಿ ಅರ್ಹರು ಎಪಿಎಲ್ ಹೋದ್ರೆ 24 ಘಂಟೆಯೊಳಗೆ ಅರ್ಜಿ ಹಾಕಿದ್ರೆ ಪಡಿತರ ವಿತರಣೆ ಮಾಡಲಾಗುವುದು. ಮುಂದಿನ ತಿಂಗಳು ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಆಹ್ವಾನ ಮಾಡುತ್ತೇವೆ ಎಂದು ಹೇಳಿದ್ದಾರೆ.