)
Gadag: ಉತ್ತರ ಕರ್ನಾಟಕದ ಹಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಬೆಣ್ಣೆಹಳ್ಳದಲ್ಲಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದೆ. ಭಾರಿ ಮಳೆಯಿಂದ ಹರಿದುಬರುತ್ತಿದ್ದ ಹಳ್ಳದ ನೀರಿನಲ್ಲಿ ರೈತ ಅಯ್ಯಪ್ಪ ತಮ್ಮ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದಾಗ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಕೊಚ್ಚಿ ಹೋಗಿದ್ದು, ಆತ್ಮಸ್ಥೈರ್ಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ರೈತ ಅಯ್ಯಪ್ಪ ರಕ್ಷಿತರಾಗಿದ್ದಾರೆ. ಆದರೆ, ಟ್ರ್ಯಾಕ್ಟರ್ ನೀರಿನಲ್ಲಿ ಸಿಕ್ಕಿಹಾಕಿಕೊಂಡು ಮುಳುಗಿಬಿಟ್ಟಿತ್ತು. ಘಟನೆ ನಡೆದ ಕೂಡಲೆ ಗ್ರಾಮಸ್ಥರು, ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಜೆಸಿಬಿ ಮೂಲಕ ಟ್ರ್ಯಾಕ್ಟರ್ ಅನ್ನು ತೆಗೆಯುವ ಕಾರ್ಯಾಚರಣೆ ಆರಂಭಿಸಿದರು.
ಇನ್ನು ಟ್ರ್ಯಾಕ್ಟರ್ ಹೊರಬಂದ ಕೂಡಲೆ ರೈತ ಅಯ್ಯಪ್ಪ ಅವರ ಮುಖದಲ್ಲಿ ಫುಲ್ ಖುಷ್ ಮೂಡಿದ ದೃಶ್ಯ ಗ್ರಾಮಸ್ಥರ ನಡುವೆ ನಿರಾಳತೆಯ ಅನುಭವ ತಂದಿತು. ಈ ಘಟನೆ ಬಳಿಕ, ಅಧಿಕಾರಿಗಳು ಬೆಣ್ಣೆಹಳ್ಳ ಸೇತುವೆ ದಾಟದಂತೆ ಮತ್ತು ನೀರಿನ ಪ್ರವಾಹದ ಹಳ್ಳದೊಳಗೆ ಯಾರೂ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರೀ ಮಳೆಗೆ ನದೀ ನಾಲೆಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ರೀತಿ ಘಟನೆಗಳು ಪುನರಾವೃತ್ತಿಯಾಗದಂತೆ, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತಿದೆ. ರೈತರಿಗೂ ಸೂಚನೆಗಳನ್ನು ಪಾಲಿಸಲು ಎಚ್ಚರಿಕೆ ನೀಡಲಾಗಿದೆ.