ಕಾಂಗ್ರೆಸ್-ಜೆಡಿಎಸ್‌ನಿಂದ ವಿಪ್ ಜಾರಿ: ಅಧಿವೇಶನದಲ್ಲಿ ಹಾಜರಾಗದ ಶಾಸಕರಿಗೆ ಅನರ್ಹತೆ ಭೀತಿ!

ಹದಿನೈದನೇ ಕರ್ನಾಟಕ ವಿಧಾನಸಭೆಯ ಅಧಿವೇಶನ 12 ಜುಲೈ, 2019 ರಿಂದ 26 ಜುಲೈ 2019ರವರೆಗೆ ನಡೆಯಲಿದೆ.

Last Updated : Jul 12, 2019, 07:45 AM IST
ಕಾಂಗ್ರೆಸ್-ಜೆಡಿಎಸ್‌ನಿಂದ ವಿಪ್ ಜಾರಿ: ಅಧಿವೇಶನದಲ್ಲಿ ಹಾಜರಾಗದ ಶಾಸಕರಿಗೆ ಅನರ್ಹತೆ ಭೀತಿ! title=

ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದಿನಿಂದ ಮಾನ್ಸೂನ್ ಅಧಿವೇಶನ ಆರಂಭವಾಗಲಿದೆ. ಹದಿನೈದನೇ ಕರ್ನಾಟಕ ವಿಧಾನಸಭೆಯ ಅಧಿವೇಶನ 12 ಜುಲೈ, 2019 ರಿಂದ 26 ಜುಲೈ 2019ರವರೆಗೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕರಾದ ಗಣೇಶ ಪ್ರಕಾಶ್ ಹುಕ್ಕೇರಿ ಅವರು ಎರಡೂ ಪಕ್ಷಗಳ ಎಲ್ಲ ಶಾಸಕರು ಅಧಿವೇಶನದಲ್ಲಿ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದಾರೆ.

ಹದಿನೈದನೇ ಕರ್ನಾಟಕ ವಿಧಾನಸಭೆಯ ಅಧಿವೇಶನ 12 ಜುಲೈ, 2019ರಿಂದ 26 ಜುಲೈ 2019ರವರೆಗೆ ವಿಧಾನಸಭೆ ಸಭಾಂಗಣದಲ್ಲಿ ಸೇರುವಂತೆ ನಿರ್ಣಯಿಸಲಾಗಿದೆ. ಸಭಾಧ್ಯಕ್ಷರು ಸದನವನ್ನು ಪ್ರಾರಂಭಿಸಿ ಮುಕ್ತಾಯಗೊಳಿಸುವವರೆಗೆ  ಕಾಂಗ್ರೆಸ್-ಜೆಡಿಎಸ್‌ ಪಕ್ಷದ ಎಲ್ಲಾ ಶಾಸಕರು ಪ್ರತಿ ದಿನದ ಕಾರ್ಯಕಲಾಪದಲ್ಲಿ ಕಡ್ಡಾಯವಾಗಿ ಉಪಸ್ಥಿತರಿದ್ದು, 12 ಜುಲೈ, 2019 ರಿಂದ 26 ಜುಲೈ 2019ರ ನಡುವೆ ಯಾವುದೇ ದಿನದಂದು ಮಂಡನೆಯಾಗುವ ವಿತ್ತೀಯ ವಿಧೇಯಕಗಳು, ಶಾಸನಗಳು ಹಾಗೂ ಇತರೆ ಕಾರ್ಯಕಲಾಪಗಳಲ್ಲಿ ಭಾಗವಹಿಸಿ "ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ" ವಿಪ್ ಜಾರಿ ಮಾಡಲಾಗಿದೆ.

ಸರ್ಕಾರದ ಮುಖ್ಯ ಸಚೇತಕರು ವಿಪ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಮುಂಬೈನತ್ತ ತೆರಳಿರುವ ಬಂಡಾಯ ಕಾಂಗ್ರೆಸ್-ಜೆಡಿ (ಎಸ್) ಶಾಸಕರು ಇಂದಿನಿಂದ ಪ್ರಾರಂಭವಾಗಲಿರುವ ಮಾನ್ಸೂನ್ ಅಧಿವೇಶನಕ್ಕೆ ಗೈರಾದರೆ ಅಥವಾ ಸರ್ಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ, ಭಾರತೀಯ ಸಂವಿಧನಾದ ಅನುಚ್ಛೇದ-10(ANTI DEFECTION LAW)ರ ಪ್ರಕಾರ ಶಾಸಕರನ್ನು ಅನರ್ಹಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಸಚೇತಕರು ವಿಪ್​ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಸೂಚನೆಯಂತೆ ಮುಂಬೈನಿಂದ ಬೆಂಗಳೂರಿಗೆ ಬಂದು ಸಭಾಪತಿಯವರನ್ನು ಭೇಟಿಯಾಗಿದ್ದ ಬಂಡಾಯ ಶಾಸಕರು ಮತ್ತೆ ಮುಂಬೈಗೆ ತೆರಳಿದ್ದಾರೆ. ವಿಪ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅವರು ಇಂದಿನ ಮುಂಗಾರು ಅಧಿವೇಶನದಲ್ಲಿ ಹಾಜರಾಗುವರೇ ಎಂಬುದು ಕುತೂಹಲವಾಗಿದೆ. ಇದೇ ವೇಳೆ ಒಂದೊಮ್ಮೆ ರೆಬೆಲ್ ಶಾಸಕರು ಅಧಿವೇಶನಕ್ಕೆ ಗೈರಾಗುವ ಸಾಹಸಕ್ಕೆ ಮುಂದಾದರೆ ಅನರ್ಹತೆ ತೂಗುಕತ್ತಿಯ ಭೀತಿ ಅವರಿಗೆ ಎದುರಾಗಲಿದೆ.

Trending News