)
ಜಾತಿ ಜನಗಣತಿ ಒಂದಲ್ಲಾ ಒಂದು ವಿವಾದದಿಂದಲೇ ಸುದ್ದಿಯಲ್ಲಿದೆ. ಇದೀಗ ಜಿಬಿಎ ವ್ಯಾಪ್ತಿಯ ಮಹಾನಗರ ಪಾಲಿಕೆಗಳ ಸಿಬ್ಬಂದಿಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕೆಲಸ ಮಾಡಿ ಸಾಯೋದಕ್ಕಿಂತಲೂ ಮನಯಲ್ಲಿದ್ದು ಜೀವ ಉಳಿಸಿಕೊಳ್ಳೋದು ಒಳ್ಳೆಯದು ಎನ್ನುವ ಯೋಚನೆಗೆ ಅಧಿಕಾರಿಗಳು ತಲುಪಿದ್ದಾರೆ ಎನ್ನಲಾಗಿದೆ.
ಜಾತಿ ಜನಗಣತಿ ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದ ಬಳಿಕ ತಡವಾಗಿ ಶುರುವಾಗ್ತಿದೆ. ಇದರಲ್ಲಿ ಜಿಬಿಎಯ ಐದು ಮಹಾನಗರ ಪಾಲಿಕೆಗಳ ಅಧಿಕಾರಿಗಳು, ಸಿಬ್ಬಂದಿಗಳನ್ನು ಸಮೀಕ್ಷೆಗೆ ಸರ್ಕಾರ ನಿಯೋಜಿಸಲಾಗಿದೆ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಕೆಲಸದ ಜೊತೆಗೆ ಪಾಲಿಕೆಯ ಕೆಲಸಗಳನ್ನೂ ಮಾಡುವಂತೆ ಜಿಬಿಎ ಟಾಸ್ಕ್ ನೀಡುತ್ತಿದೆ. ಇದರಿಂದ ಅತಿಯಾದ ಕೆಲಸ, ಮಾನಸಿಕ ಒತ್ತಡಕ್ಕೆ ಒಂದೇ ತಿಂಗಳಲ್ಲಿ ಐದು ಸಾವಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೇಸತ್ತ ಪಾಲಿಕೆಯ ನೌಕರರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : PSI ಶ್ರೀಕಾಂತ್ ಕಾಂಬಳೆಗೆ ಕರ್ನಾಟಕ ಐಡಲ್ ಪ್ರಶಸ್ತಿ
ಅಧಿಕಾರಿ, ನೌಕರರ ಆರೋಪಗಳೇನು..?
-2025ರ ಮತದಾನ ಪಟ್ಟಿ ಪರಿಷ್ಕರಣೆ ಹಿನ್ನೆಲೆ ಪಟ್ಟಿ ಮ್ಯಾಪಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದೆ
-ಬಿಎಲ್ಓ ಸೂಪರ್ ವೈಸರ್ ಗಳಾಗಿ ರಾತ್ರಿ-ಹಗಲು ಕೆಲಸ
-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲೂ ಅಧಿಕಾರಿ, ನೌಕರರು ಭಾಗಿ
-ಈ ನಡುವೆ ಕಂದಾಯ ಪರಿವೀಕ್ಷಕರು ಪ್ರತಿದಿನ ತಲಾ ಒಂದೊಂದು ಆಸ್ತಿ ಸೀಲಿಂಗ್ ಮಾಡಬೇಕು ಒತ್ತಾಯ
-ಕಂದಾಯ ವಿಭಾಗದ ವಿಶೇಷ ಆಯುಕ್ತರಿಂದ ಒತ್ತಡ ಹಾಕುವ ಕೆಲಸ
ಇನ್ನು ಹಗಲು ರಾತ್ರಿ ಕೆಲಸ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದುವರೆ ತಿಂಗಳಿನಲ್ಲಿ 5 ಜನ ಕಂದಾಯ ಇಲಾಖೆ ನೌಕರರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಸರ್ಕಾರಿ ನೌಕರರು ಕಾರ್ಯ ಒತ್ತಡದಿಂದ ಐವತ್ತಕ್ಕೂ ಹೆಚ್ಚು ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದೂ ಆಪಾದಿಸಲಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಗಿಯವವರೆಗೂ ಇ ಆಸ್ತಿ ಹಾಗೂ ಆಸ್ತಿ ಸೀಲಿಂಗ್ ಮಾಡಲು ಒತ್ತಾಯಿಸದಂತೆ ಮನವಿ ಮಾಡಲಾಗಿದೆ. ಇದೊಂದು ರೀತಿ ಮಾನಸಿಕ, ದೈಹಿಕ ಹಿಂಸೆ ಆಗುತ್ತಿದ್ದು, ಹತ್ತು ಸಾವಿರ ನೌಕರರು ಮಾಡುವ ಕೆಲಸವನ್ನು ಕೇವಲ ಮೂರು ಸಾವಿರ ನೌಕರರಿಂದ ಮಾಡಿಸಲಾಗುತ್ತಿದೆ. ಇದರಿಂದ ಸಾವು ನೋವು ಹೆಚ್ಚಾಗುತ್ತಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಬಾಗಲಕೋಟೆ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
ಒಟ್ಟಾರೆ ಸಮೀಕ್ಷೆ ಮುಗಿಯೋವರೆಗೂ ಆಸ್ತಿ ಸೀಲಿಂಗ್ ಕೆಲಸ ಮಾಡಲ್ಲ ಅನ್ನೋದು ಇವರ ವಾದ. ಜೊತೆಗೆ ಅತಿಯಾದ ಕೆಲಸ, ಮಾನಸಿಕ ಒತ್ತಡದಿಂದ ಬೇಸತ್ತ 50ಕ್ಕೂ ಹೆಚ್ಚು ಅಧಿಕಾರಿ, ನೌಕರರಿಂದ ರಾಜೀನಾಮೆ ಬೆದರಿಕೆ ಬಂದಿದೆ.