ಖಾಸಗಿ ಪಬ್ಲಿಕ್ ಸ್ಕೂಲ್ ಗಳನ್ನೇ ನಾಚಿಸುವಂತಿದೆ ಈ ಸರ್ಕಾರಿ ಕನ್ನಡ ಶಾಲೆ...!

ಪಬ್ಲಿಕ್ ಶಾಲೆಗಳು, ಇಂಟರ್ ನ್ಯಾಷನಲ್ ಸ್ಕೂಲ್ ಗಳು ಹೀಗೆ ಖಾಸಗಿ ಮಾದರಿಯ ಶಾಲೆಗಳೇ ಇಂದು ರಾಜ್ಯದಲ್ಲಿ ಅಬ್ಬರಿಸುತ್ತಿವೆ.ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರ ಆಸ್ಥೆ ಮತ್ತು ಕಾಳಜಿಯಿಂದ ಸರ್ಕಾರಿ ಕನ್ನಡ ಶಾಲೆಯನ್ನು ಹೇಗೆಲ್ಲ ಅಭಿವೃದ್ದಿ ಮಾಡಬಹುದು ಎನ್ನುವುದಕ್ಕೆ ರಾಯಬಾಗದ ನಿಡಗುಂದಿ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ ಎನ್ನುವಂತಿದೆ. 

Last Updated : Jan 6, 2019, 12:33 PM IST
ಖಾಸಗಿ ಪಬ್ಲಿಕ್ ಸ್ಕೂಲ್ ಗಳನ್ನೇ ನಾಚಿಸುವಂತಿದೆ ಈ ಸರ್ಕಾರಿ ಕನ್ನಡ ಶಾಲೆ...!  title=
Photo courtesy: Facebook

ಬೆಂಗಳೂರು: ಪಬ್ಲಿಕ್ ಶಾಲೆಗಳು, ಇಂಟರ್ ನ್ಯಾಷನಲ್ ಸ್ಕೂಲ್ ಗಳು ಹೀಗೆ ಖಾಸಗಿ ಮಾದರಿಯ ಶಾಲೆಗಳೇ ಇಂದು ರಾಜ್ಯದಲ್ಲಿ ಅಬ್ಬರಿಸುತ್ತಿವೆ.ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರ ಆಸ್ಥೆ ಮತ್ತು ಕಾಳಜಿಯಿಂದ ಸರ್ಕಾರಿ ಕನ್ನಡ ಶಾಲೆಯನ್ನು ಹೇಗೆಲ್ಲ ಅಭಿವೃದ್ದಿ ಮಾಡಬಹುದು ಎನ್ನುವುದಕ್ಕೆ ರಾಯಬಾಗದ ನಿಡಗುಂದಿ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ ಎನ್ನುವಂತಿದೆ. 

ಅಷ್ಟಕ್ಕೂ ಇದೆಲ್ಲವೂ ಸಾಧ್ಯವಾದದ್ದು ಕೇವಲ ಒಬ್ಬನೇ ಶಿಕ್ಷಕನ ಪ್ರಯತ್ನದಿಂದ ಎಂದರೆ ನಂಬುತ್ತಿರಾ? ಹೌದು ,ನೀವು ನಂಬಲೇಬೇಕು. ಪ್ರವೃತ್ತಿಯಲ್ಲಿ ಕವಿ, ಫೋಟೋಗ್ರಾಪರ್ ರಾಗಿರುವ ಶಿಕ್ಷಕ ವೀರಣ್ಣ ಮಡಿವಾಳರವರ ಪ್ರಯತ್ನದಿಂದ ಈಗ ಸರ್ಕಾರಿ ಕನ್ನಡ ಶಾಲೆಯೊಂದು ಕಾವ್ಯದ ರೂಪಕವಾಗಿದೆ. ವೀರಣ್ಣ ಮಡಿವಾಳರ ತಾವು ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕನ್ನಡ ಶಾಲೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕೆಲವು ತಿಂಗಳುಗಳ ಹಿಂದೆ ಫೆಸ್ ಬುಕ್ ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು.ಅದರ ಭಾಗವಾಗಿ ಹಲವಾರು ಹಿತೈಸಿಗಳ ಮೂಲಕ ಸಂಗ್ರಹಿಸಿದ ಹಣದಿಂದಲೇ ಕನ್ನಡ ಶಾಲೆಯೊಂದನ್ನು ಖಾಸಗಿ ಪಬ್ಲಿಕ್ ಶಾಲೆಗಳನ್ನು ಮೀರಿಸುವಂತೆ ಕೆಲವೇ ತಿಂಗಳುಗಳಲ್ಲಿ ಅಭಿವೃದ್ದಿಪಡಿಸಿದ್ದಾರೆ. 

ಇಂಗ್ಲಿಷ್ ಮಾಧ್ಯಮದ ವ್ಯಾಮೋಹಕ್ಕೆ ಬಿದ್ದಿರುವ ಈ ದಿನಗಳಲ್ಲಿ ಸರ್ಕಾರಿ ಕನ್ನಡ  ಶಾಲೆಗಳು ಸರ್ಕಾರದಿಂದಲೇ ನಿರ್ಲಕ್ಷಕ್ಕೆ ಒಳಗಾಗಿವೆ. ಇದರ ಭಾಗವಾಗಿ ರಾಜ್ಯದಲ್ಲಿ ನಿರಂತರವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದಿದೆ. ಆದರೆ ಇಂತಹ ವ್ಯವಸ್ಥೆಯ ನಡುವೆಯೂ ಶಿಕ್ಷಕರೊಬ್ಬರ ಕನ್ನಡ ಶಾಲೆಗಳ ಮೇಲಿರುವ ಕಾಳಜಿಯಿಂದಾಗಿ ಸರ್ಕಾರಿ ಶಾಲೆಯೀಗ ಸುಂದರ, ಸಮೃದ್ಧ ಮತ್ತು ಸಂಪನ್ಮೂಲ ಭರಿತವಾಗಿ ಪರಿವರ್ತನೆಗೊಂಡಿದೆ.ಆ  ಮೂಲಕ ಕನ್ನಡ ಶಾಲೆಯ ಮಕ್ಕಳಿಗೂಸಹ ಕುಳಿತುಕೊಳ್ಳಲು ಬಣ್ಣ ಬಣ್ಣದ ಕುರ್ಚಿಗಳು, ಟೇಬಲ್ ಗಳು, ಮತ್ತು  ಶಾಲೆಯ ಆವರಣ ಮತ್ತು ಕಂಪೌಂಡ್ ಗಳು ಶೃಂಗಾರಗೊಂಡಿವೆ. ಒಟ್ಟಿನಲ್ಲಿ ಹೇಳುವುದಾದರೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲದ ಸೌಲಭ್ಯಗಳು ಈ ಶಾಲೆಯಲ್ಲಿ ಮಕ್ಕಳಿಗೆ ಸಿಕ್ಕಿವೆ.

ಆ ಮೂಲಕ ಈಗ ರಾಯಭಾಗದ ನಿಡಗುಂದಿ ಗ್ರಾಮದ ಕನ್ನಡ ಶಾಲೆಯು ಸರ್ಕಾರಿ ಶಾಲೆಗಳು ಹೇಗಿರಬೇಕು ಎನ್ನುವುದಕ್ಕೆ ಒಂದು ಉತ್ತಮ ಮಾದರಿಯಾಗಿದೆ.ಹಲವು ಕೊರತೆಗಳ ನಡುವೆಯೂ ಕೂಡ ಸರ್ಕಾರಿ ಕನ್ನಡ ಶಾಲೆಯೊಂದನ್ನು ಉತ್ತಮ ರೀತಿಯಲ್ಲಿ ಕಟ್ಟಬಹುದು ಎನ್ನುವುದಕ್ಕೆ ಶಿಕ್ಷಕ ವೀರಣ್ಣ ಮಡಿವಾಳರ ಪ್ರಯತ್ನವೇ ಇದಕ್ಕೆ ಸಾಕ್ಷಿ ಎನ್ನಬಹುದು.ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರು ಇದೇ ರೀತಿಯ ಕಾಳಜಿ ಶ್ರಮವನ್ನು ವಹಿಸಿದರೆ ಕನ್ನಡ ಶಾಲೆಗಳು ಗತವೈಭವ ಕಾಣಬಹುದು. ಆ ನಿಟ್ಟಿನಲ್ಲಿ ಈಗ ರಾಜ್ಯದಲ್ಲಿ ನಿಡಗುಂದಿ ಮಾದರಿ ಶಾಲೆಗಳು ಅಭಿವೃದ್ದಿಗೊಳ್ಳಬೇಕಾಗಿದೆ. ಆದ್ದರಿಂದ ಇದಕ್ಕೆ ಸರ್ಕಾರ, ಶಿಕ್ಷಕರು,ಹಾಗೂ ಸಾರ್ವಜನಿಕರ ಸಹಕಾರವು ಸಹ ಅವಶ್ಯಕವಾಗಿದೆ.

ಧಾರವಾಡದಲ್ಲಿ ನಡೆಯಿತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ  ಸರ್ಕಾರಿ ಶಾಲೆಗಳ ಉಳುವಿನ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕ ವೀರಣ್ಣ ಮಡಿವಾಳರ " ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಶಾಲೆಗಳ ಉಳುವಿನ ಪ್ರಶ್ನೆಯೇ ಪ್ರಥಮ ಆಧ್ಯತೆಯಾಗಬೇಕು. ಕನ್ನಡ ಎಂದರೆ ಕನ್ನಡ ಮಕ್ಕಳು,ಕನ್ನಡ ಮಕ್ಕಳು ಎಂದರೆ ಕನ್ನಡ ಸರ್ಕಾರಿ ಶಾಲೆಗಳು"

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವೀರಣ್ಣ  ಮಡಿವಾಳರ. 
ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ್ ನಗರ, ನಿಡಗುಂದಿ - ೫೯೧೩೧೭
ತಾ: ರಾಯಬಾಗ. 
ಮೊಬೈಲ್: 9972120570

 

Trending News