)
Haveri bus strike: ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ಬಸ್ ಸಂಚಾರದಲ್ಲಿ ಅಸ್ಥಿರತೆ ನಿರ್ಮಾಣವಾಗಿದೆ. ಹಾವೇರಿ ಟೂ ಹುಬ್ಬಳ್ಳಿ ಹೋಗುತ್ತಿದ್ದ ಬಸ್ಗಳನ್ನು ಸಧ್ಯಕ್ಕೆ ಬಿಡದ ನಿರ್ಧಾರಕ್ಕೆ ಪ್ರಯಾಣಿಕರಿಂದ ಕಿರಿಕ್ ಉಂಟಾಗಿದೆ. ಬೆಳಿಗ್ಗೆಯಿಂದ ಬಸ್ಗಳು ಸಂಚರಿಸುತ್ತಿದ್ದರೂ ಮಧ್ಯಾಹ್ನದ ನಂತರ ಅವು ತಾತ್ಕಾಲಿಕವಾಗಿ ನಿಂತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಗೆ ಹೋಗಬೇಕೆಂದು ಬಸ್ಗೆ ಏರಿದ್ದ ಪ್ರಯಾಣಿಕರಿಗೆ, "ಈ ಬಸ್ ಹೋಗೋದಿಲ್ಲ, ಕೆಳಗೆ ಇಳಿರಿ" ಎಂದು ಮಹಿಳಾ ಕಂಡಕ್ಟರ್ ಸೂಚಿಸಿದ್ದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
"ಬೆಳಿಗ್ಗೆ ಬಸ್ಗಳು ಹೋಗ್ತಿದ್ವೆ, ಇವಗ್ ಏನ್ ಆಯ್ತು? ಯಾಕೆ ಬಸ್ ಬಿಟ್ ಹೋಗಲ್ಲ?" ಎಂಬ ಪ್ರಶ್ನೆಗಳನ್ನು ಪ್ರಯಾಣಿಕರು ಅಧಿಕಾರಿಗಳ ಮುಂದೆ ಉಚ್ಛರಿಸಿದರು. ನಂತರವೇ ಪ್ರಯಾಣಿಕರು ನೇರವಾಗಿ ಕಂಟ್ರೋಲ್ ರೂಮ್ಗೆ ತೆರಳಿ ಬಸ್ ಬಿಡುವಂತೆ ಒತ್ತಾಯಿಸಿದರು.
ಅದಕ್ಕೆ ಪ್ರತಿಯಾಗಿ ಮಹಿಳಾ ಕಂಟ್ರೋಲರ್ "ನಮಗೆ ತಿಳಿಯಲ್ಲ, ಡಿಪೋನಲ್ಲಿ ಕೇಳಿ" ಎಂದು ಉತ್ತರಿಸಿದ ಘಟನೆ ಭಾರಿ ಗೊಂದಲಕ್ಕೆ ದಾರಿ ನೀಡಿತು.
ಹಾವೇರಿ ಸಾರಿಗೆ ಡಿಪೋದಿಂದ ಹುಬ್ಬಳ್ಳಿ ಮಾರ್ಗದ ಬಸ್ ಸೇವೆ ಪುನರಾರಂಭವಾಗುವ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಸಮಯದೊಳಗೆ ಮೇಲಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.