)
Online Ambulance Service: ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಮೊದಲು ಮಾಡಬೇಕಾದ ಕೆಲಸ ಆ್ಯಂಬುಲೆನ್ಸ್ ಬುಕ್ಕಿಂಗ್. ಆದರೆ, ಬಹುತೇಕ ಸಂದರ್ಭಗಳಲ್ಲಿ 108 ಆ್ಯಂಬುಲೆನ್ಸ್ ಅಥವಾ ಬಬೇರಾವುದೇ ಖಾಸಗಿ ಆ್ಯಂಬುಲೆನ್ಸ್ಗಳ ಸಹ ಸರಿಯಾದ ಸಮಯಕ್ಕೆ ಬುಕ್ ಆಗದೆ ಜನರ ಪರಿತಪಿಸುವಂತಾಗುತ್ತದೆ. ರೋಗಿಯ ಸ್ಥಿತಿಗತಿಯನ್ನು ಪರಿಶೀಲಿಸಿ ಆ್ಯಂಬುಲೆನ್ಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿ ರೋಗಿಯಿರುವ ಸ್ಥಳಕ್ಕೆ ಆ್ಯಂಬುಲೆನ್ಸ್ ಬರುವಷ್ಟರಲ್ಲಿ ರೋಗಿಗಳ ಸ್ಥಿತಿ ಗಂಭೀರವಾಗಿರುತ್ತದೆ. ಎಷ್ಟೋ ಬಾರಿ ಇದು ಅವರ ಪ್ರಾಣಕ್ಕೂ ಕುತ್ತು ತರಬಹುದು. ಇಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕುವ ಸಲುವಾಗಿ ಇದೀಗ ಆರೋಗ್ಯ ಇಲಾಖೆ ಆ್ಯಪ್ ಆಧಾರಿತ ಸೇವೆ ಒದಗಿಸಲು ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ಆ್ಯಂಬುಲೆನ್ಸ್ ಸೇವೆ ಮತ್ತಷ್ಟು ಸುಲಭವಾಗಲಿದೆ.
ವಾಸ್ತವವಾಗಿ, ಸರಿಯಾದ ಸಮಯಕ್ಕೆ ರೋಗಿಗಳಿಗೆ ಆ್ಯಂಬುಲೆನ್ಸ್ ಸಿಗುವಂತಾಗಬೇಕು. ತುರ್ತಾಗಿ ಚಿಕಿತ್ಸೆ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಓಲಾ, ಊಬರ್ ಕ್ಯಾಬ್ಗಳನ್ನು ಬುಕ್ ಮಾಡುವ ಮಾದರಿಯಲ್ಲಿಯೇ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಇದರಿಂದ ಆ್ಯಂಬುಲೆನ್ಸ್ ಸೇವೆ ಮತ್ತಷ್ಟು ಸರಳ ಮತ್ತು ಸುಲಭವಾಗಿ ಲಭ್ಯವಾಗಲಿದೆ.
ಆ್ಯಪ್ ಆಧಾರಿತ ಆ್ಯಂಬುಲೆನ್ಸ್ ಸೇವೆ:
ಆರೋಗ್ಯ ಇಲಾಖೆ ಹೊಸ ಪ್ಲಾನ್ ಪ್ರಕಾರ, ಈ ಆ್ಯಪ್ ಆಧಾರಿತ ಆ್ಯಂಬುಲೆನ್ಸ್ ಸೇವೆಯನ್ನು ಪಡೆಯಲು ತುರ್ತು ಸಂದರ್ಭಗಳಲ್ಲಿ ನಾವಿರುವ ಸ್ಥಳದಿಂದ ಯಾವ್ ಆಸ್ಪತ್ರೆ ಅಥವಾ ಪಿಹೆಚ್ಸಿ ಸೆಂಟರ್ಗೆ ಹೋಗಬೇಕೆಂದು ಆಯ್ಕೆ ಮಾಡಿದರೆ ಸಾಕು ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪಲಿದೆ.
ಆ್ಯಪ್ ಆಧಾರಿತ ಆ್ಯಂಬುಲೆನ್ಸ್ ಶುಲ್ಕ:
ಆ್ಯಪ್ ಆಧಾರಿತ ಆ್ಯಂಬುಲೆನ್ಸ್ ಸೇವೆಯಲ್ಲಿ ಕೇವಲ ಸರ್ಕಾರದ ಉಚಿತ ಆ್ಯಂಬುಲೆನ್ಸ್ ಮಾತ್ರವಲ್ಲದೆ, ಖಾಸಗಿ ಆ್ಯಂಬುಲೆನ್ಸ್ಗಳನ್ನು ಕೂಡ ಸೇರಿಸಲಾಗುವುದು. ಹಾಗಂತ, ಖಾಸಗಿ ಆ್ಯಂಬುಲೆನ್ಸ್ಗಳಿಗೆ ಅಧಿಕ ಶುಲ್ಕ ಭರಿಸಬೇಕಾಗಬಹುದು ಎಂಬ ಚಿಂತೆಯೂ ಇರುವುದಿಲ್ಲ. ಏಕೆಂದರೆ ಎಲ್ಲಾ ಖಾಸಗಿ ಆ್ಯಂಬುಲೆನ್ಸ್ಗಳಿಗೆ ಸರ್ಕಾರವೇ ಏಕರೂಪದ ಶುಲ್ಕವನ್ನು ನಿಗದಿ ಮಾಡಲಿದೆ ಎಂದು ತಿಳಿದುಬಂದಿದೆ.
ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಸೇವೆಗೆ ಪ್ಲಾನ್ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?
ಕರ್ನಾಟಕದಲ್ಲಿ ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ. ಇದರ ಆಗುಹೋಗುಗಳ ಬಗ್ಗೆ ಸಮಾಲೋಚನೆ ಬಳಿಕ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.