ಮಂಗನ ಕಾಯಿಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಮಂಗನ ಕಾಯಿಲೆ ತಡೆಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು: ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆ ತಡೆಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನಗರದ ವಕೀಲ ಕೆ.ಪಿ. ಶ್ರೀಪಾಲ್ ಹಾಗೂ ಸೊರಬ ತಾಲೂಕಿನ ಚಿಕ್ಕಚೌಟಿಯ ವಕೀಲ ಎನ್.ಜಿ. ರಮೇಶಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ರಾಜ್ಯ ಸರ್ಕಾರ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದ್ದಾರೆ.
ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಎಂದು ಕರೆಯಲ್ಪಡುವ ಸಾವಿನ ಜ್ವರಕ್ಕೆ 7 ದಶಕಗಳ ಇತಿಹಾಸವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತಿತ್ತು. ಆದರೆ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡಿದ್ದು, ಈಗಾಗಲೇ ಒಂದು ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೇ ಎಂಟಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.