)
Road Accident: ಬೆಳಗಾವಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ರಸ್ತೆ ಅಪಘಾತದಲ್ಲಿ ದೇವಾಲಯದ ಮುಖ್ಯ ಅರ್ಚಕ ಸೇರಿ ಇಬ್ಬರು ದುರ್ಮರಣ ಹೊಂದಿದ್ದು, ನಾಲ್ಕು ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ ಬಳಿಯ ಶಿವನ ಮೂರ್ತಿ ಎದುರು ಗೂಡ್ಸ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಗೂಡ್ಸ್ ವಾಹನದ ಚಾಲಕ ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಈ ಭೀಕರ ರಸ್ತೆ ಅಪಘಾತದಲ್ಲಿ ರಾಮದುರ್ಗ ಪಟ್ಟಣದ ನಿವಾಸಿ, ಶಿವಲಿಂಗ ದೇವಸ್ಥಾನದ ಮುಖ್ಯ ಅರ್ಚಕ ವಿಜಯಕುಮಾರ್ ಘೋಡಬೋಲೆ( 55) ಹಾಗೂ ಕಲಬುರಗಿ ಮೂಲದ ಗೂಡ್ಸ್ ವಾಹನದ ಚಾಲಕ ಅನಿಲ್ ರಮೇಶ ಬಿರಾದಾರ( 23) ಅಪಘಾತ ಸ್ಥಳದಲ್ಲೇ ಮೃತಪಟ್ಟಿರುವ ದುರ್ದೈವಿಗಳು ಎಂದು ತಿಳಿದುಬಂದಿದೆ.
ಹಾವೇರಿಯಿಂದ ರಾಮದುರ್ಗಕ್ಕೆ ಬರ್ತಿದ್ದ ಗೂಡ್ಸ್ ವಾಹನ ಘಾಟನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದೇವಸ್ಥಾನಕ್ಕೆ ಹೊರಟ್ಟಿದ್ದ ಅರ್ಚಕ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ದೇವಸ್ಥಾನದ ಮುಖ್ಯ ಅರ್ಚಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದೆಡೆ ಗೂಡ್ಸ್ ವಾಹನ ಪಲ್ಟಿಯಾದ ಹಿನ್ನೆಲೆಯಲ್ಲಿ ವಾಹನ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ರಾಮದುರ್ಗ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.