Karnataka CM & MLA Salary: ಕರ್ನಾಟಕದಲ್ಲಿ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನ ಎಷ್ಟಿದೆ ಅನ್ನೋ ಕುತೂಹಲ ಅನೇಕರಲ್ಲಿ ಇರುತ್ತದೆ. ಸಂಬಳದ ಜೊತೆಗೆ ಅವರಿಗೆ ನಾನಾ ಭತ್ಯೆಗಳನ್ನೂ ನೀಡಲಾಗುತ್ತದೆ. 300 ರೂಪಾಯಿಗೆ ಅನ್ಲಿಮಿಡೆಟ್ ಕಾಲ್ ಸಿಕ್ತಿದ್ರೂ ದೂರವಾಣಿ ವೆಚ್ಚ 20 ಸಾವಿರ ರೂ. ನೀಡಲಾಗುತ್ತಿದೆ. ರಾಜಕಾರಣಿಗಳ ವೇತನ ಹೆಚ್ಚಳದ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಸದ್ಯ ಶಾಸಕರ ವೇತನ ಎಲ್ಲಾ ರೀತಿಯ ಭತ್ಯೆಗಳನ್ನೊಳಗೊಂಡಂತೆ ತಿಂಗಳಿಗೆ 2.05 ಲಕ್ಷ ರೂ. ಇದೆ. ಇನ್ನು ಸಿಎಂ, ಸ್ಪೀಕರ್, ಸಭಾಪತಿಯವರ ಸಂಬಳ 10 ಲಕ್ಷ ರೂ.ಗೆ ಮುಟ್ಟಿದರೆ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ವೇತನ ಕೂಡ ಹೆಚ್ಚು ಕಡಿಮೆ ಒಂದೇ ಇದೆ.
ಕರ್ನಾಟಕ ಶಾಸಕರ ವೇತನ: ಯಾವುದಕ್ಕೆ ಎಷ್ಟು ?
ಮೂಲ ವೇತನ - 40 ಸಾವಿರ ರೂ.
ದೂರವಾಣಿ ವೆಚ್ಚ - 20 ಸಾವಿರ ರೂ.
ವೈಯಕ್ತಿಕ ಭತ್ಯೆ - 20 ಸಾವಿರ ರೂ.
ಕ್ಷೇತ್ರ ಭತ್ಯೆ - 60 ಸಾವಿರ ರೂ.
ಕ್ಷೇತ್ರ ಪ್ರಯಾಣ ಭತ್ಯೆ - 60 ಸಾವಿರ ರೂ.
ಅಂಚೆ ವೆಚ್ಚ - 5 ಸಾವಿರ ರೂ.
ಒಟ್ಟು - 2 ಲಕ್ಷದ 5 ಸಾವಿರ ರೂ. ಸಿಗುತ್ತದೆ.
ಕರ್ನಾಟಕದ ಶಾಸಕರಿಗೆ ತಿಂಗಳಿಗೆ ಮೂಲ ವೇತನವಾಗಿ 40 ಸಾವಿರ ರೂ. ಸಿಗುತ್ತಿದ್ದು, ದೂರವಾಣಿ ವೆಚ್ಚವೆಂದು ಬರೋಬ್ಬರಿ 20 ಸಾವಿರ ರೂ. ಸಿಗುತ್ತಿದೆ. ವೈಯಕ್ತಿಕ ಭತ್ಯೆ, ರೂಮ್ ಬಾಯ್‌ಗಾಗಿ 20 ಸಾವಿರ ರೂ. ಸಿಗುತ್ತಿದೆ. ಕ್ಷೇತ್ರ ಭತ್ಯೆ ಎಂದು 60 ಸಾವಿರ ರೂ. ನೀಡಲಾಗುತ್ತದೆ. ಜೊತೆಗೆ ಕ್ಷೇತ್ರ ಪ್ರಯಾಣ ಭತ್ಯೆ 60 ಸಾವಿರ ರೂ. ಮತ್ತು ಅಂಚೆ ವೆಚ್ಚಕ್ಕೆ 5 ಸಾವಿರ ರೂ. ನೀಡಲಾಗುತ್ತಿದೆ. ಎಲ್ಲಾ ಸೇರಿ ತಿಂಗಳಿಗೆ ಶಾಸಕರು ಒಟ್ಟು 2 ಲಕ್ಷದ 5 ಸಾವಿರ ರೂ. ವೇತನ ಪಡೆಯುತ್ತಾರೆ. ಅಂದರೆ ವರ್ಷಕ್ಕೆ 24 ಲಕ್ಷ 60 ಸಾವಿರ ರೂ. ಪಡೆಯುತ್ತಾರೆ.
ಇದನ್ನೂ ಓದಿ: 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 CNG ಕಾರುಗಳು: ಕುಟುಂಬಕ್ಕೆ ಇವೇ ಬೆಸ್ಟ್..!
ದೂರವಾಣಿಗೆ 20 ಸಾವಿರ ರೂಪಾಯಿ
ಸದ್ಯ ಎಲ್ಲಾ ಸಿಮ್ ಕಂಪನಿಗಳು 300 ರೂ. ನಿಂದ 400 ರೂ.ಗೆ ಅನ್ಲಿಮಿಟೆಡ್ ಫೋನ್ ಕಾಲ್, ಮೆಸೇಜ್ ಹಾಗೂ ಇಂಟರ್‌ನೆಟ್ ಸಹ ನೀಡುತ್ತಿವೆ. ಶಾಸಕರು ವೈಯಕ್ತಿಕ, ಮನೆ, ಕಚೇರಿ ಎಂದು ನಾಲ್ಕು ಸಿಮ್ ಇಟ್ಟುಕೊಂಡರೂ ಒಂದರಿಂದ ಎರಡು ಸಾವಿರ ದೂರವಾಣಿ ವೆಚ್ಚವಾಗುತ್ತದೆ. ಆದರೆ 20 ಸಾವಿರ ಯಾಕೆ ನೀಡಲಾಗುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಹಿಂದೆ ಇದ್ದ ಟೆಲಿಕಾಂ ಕಂಪನಿಗಳ ದುಬಾರಿ ವೆಚ್ಚವನ್ನೇ ಮುಂದುವರೆಸಿಕೊಂಡು ಬರಲಾಗಿದ್ದು, ಈ ಮೊತ್ತ ತಗ್ಗಿಸಬೇಕೆಂಬ ಒತ್ತಾಯಗಳು ಕೇಳಿಬಂದಿದೆ. ಈಗ ಶೇ.50ರಷ್ಟು ಮೂಲ ವೇತನ ಏರಿಕೆ ಮಾಡುವ ಪ್ರಸ್ತಾಪವಿದ್ದು, ಕನಿಷ್ಠ 20 ಸಾವಿರ ರೂ. ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಇದು ಜಾರಿಯಾದರೆ ಶಾಸಕರ ವೇತನ ತಿಂಗಳಿಗೆ 2 ಲಕ್ಷದ 25 ಸಾವಿರ ರೂ.ಗೆ ತಲುಪುವ ನಿರೀಕ್ಷೆಯಿದೆ.
ಯಾವ ರಾಜ್ಯದಲ್ಲಿ ಶಾಸಕರ ಸಂಬಳ ಎಷ್ಟಿದೆ?
ಜಾರ್ಖಂಡ್ - 2.9 ಲಕ್ಷ ರೂ.
ಮಹಾರಾಷ್ಟ್ರ - 2.6 ಲಕ್ಷ ರೂ.
ತೆಲಂಗಾಣ - 2.5 ಲಕ್ಷ ರೂ.
ಮಣಿಪುರ - 2.5 ಲಕ್ಷ ರೂ.
ಹಿಮಾಚಲ ಪ್ರದೇಶ - 2.1 ಲಕ್ಷ ರೂ.
ಕರ್ನಾಟಕ - 2.05 ಲಕ್ಷ ರೂ.
ಉತ್ತರಾಖಂಡ - 2.04 ಲಕ್ಷ ರೂ.
ಮೇಘಾಲಯ - 2.02 ಲಕ್ಷ ರೂ.
ಕರ್ನಾಟಕ ಮುಖ್ಯಮಂತ್ರಿಗಳ ವೇತನ ಎಷ್ಟು?
ಮೂಲ ವೇತನ - 75 ಸಾವಿರ ರೂ.
ಮನೆ ಬಾಡಿಗೆ ಭತ್ಯೆ - 1.20 ಲಕ್ಷ ರೂ.
ಮನೆ ನಿರ್ವಹಣೆ ಭತ್ಯೆ - 30 ಸಾವಿರ ರೂ.
ವೈಯುಕ್ತಿಕ ಆಹಾರ, ವಸ್ತುಗಳ ಖರೀದಿ & ಇತರೆ ಭತ್ಯೆ - 4.5 ಲಕ್ಷ ರೂ.
ಪ್ರತಿದಿನ ಪ್ರಯಾಣ ಭತ್ಯೆ - 2,500 ಸಾವಿರ ರೂ.
ಸಾರಿಗೆ ಭತ್ಯೆ (Road Mileage Allowance) - ಪ್ರತಿ ಕಿಮೀಗೆ 30 ರೂ.
ಉಚಿತ ಇಂಧನ - 1500 ಲೀ. ಪೆಟ್ರೋಲ್
ಒಟ್ಟು - ಸುಮಾರು 10 ಲಕ್ಷ ರೂ. ಮೌಲ್ಯ
ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸದ್ಯ ತಿಂಗಳಿಗೆ ಮಾಸಿಕ 75 ಸಾವಿರ ರೂ. ವೇತನ ಸಿಗುತ್ತದೆ. 2022ಕ್ಕೂ ಮೊದಲು ಕರ್ನಾಟಕದ ಸಿಎಂ ವೇತನ 50 ಸಾವಿರ ರೂ. ಇತ್ತು. ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮಕ್ಕೆ 2022ರಲ್ಲಿ ತಿದ್ದುಪಡಿ ತಂದು ಮುಖ್ಯಮಂತ್ರಿ ಹಾಗೂ ಶಾಸಕರು, ಪರಿಷತ್ ಸದಸ್ಯರು, ಸ್ಪೀಕರ್ ಹಾಗೂ ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಿಸಲಾಗಿತ್ತು. ಕೇವಲ ಮಾಸಿಕ ವೇತನ ಅಷ್ಟೇ ಅಲ್ಲದೇ ಅನೇಕ ಭತ್ಯೆಗಳನ್ನೂ ಸಿಎಂ ಪಡೆಯುತ್ತಾರೆ. ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ., ಮನೆ ನಿರ್ವಹಣೆ ಭತ್ಯೆ 30,000 ರೂ., ಪ್ರತಿ ದಿನದ ಪ್ರಯಾಣ ಭತ್ಯೆ 2,500 ರೂ., ವೈಯಕ್ತಿಕ ಆಹಾರ, ವಸ್ತುಗಳ ಖರೀದಿ ಮತ್ತು ಇತರೆ ಭತ್ಯೆಗಳು ಎಂದು ಒಟ್ಟು 4.5 ಲಕ್ಷ ರೂ. ನೀಡಲಾಗುತ್ತದೆ.
ಇದನ್ನೂ ಓದಿ: ದೇಶದಲ್ಲಿ ಕೊನೆಗೂ ಪತ್ತೆಯಾಯ್ತು 1000 ಟನ್ ಚಿನ್ನದ ನಿಕ್ಷೇಪ! ಇನ್ಮುಂದೆ ಕಡುಬಡವರಿಗೂ ಕೈಗೆಟುಕುವ ದರದಲ್ಲಿ ಸಿಗಲಿದೆಯಾ ಬಂಗಾರ?
ಸಾರಿಗೆ ಭತ್ಯೆ ಎಂದು ಕಿಮೀಗೆ 30 ರೂ. ನೀಡಲಾಗುತ್ತದೆ. ಇದರ ಜೊತೆಗೆ 1,500 ಲೀಟರ್ ಇಂಧನ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುತ್ತದೆ. ಪ್ರಯಾಣ, ಸಾರಿಗೆ ಭತ್ಯೆ ಹೊರತುಪಡಿಸಿದರೆ ಮುಖ್ಯಮಂತ್ರಿಗಳಿಗೆ ವೇತನ ಹಾಗೂ ಎಲ್ಲಾ ಭತ್ಯೆಗಳು ಸೇರಿ ಒಟ್ಟು 6,75,000 ರೂ. ಆಗುತ್ತದೆ. ಇನ್ನು 1500 ಲೀಟರ್ ಉಚಿತ ಇಂಧನ ಎಂದರೆ 1,50,000 ಲಕ್ಷ ರೂ. ಸಿಗುತ್ತದೆ. ಒಟ್ಟು ಎಲ್ಲಾ ಸೇರಿ ಪ್ರತಿ ತಿಂಗಳು ಸುಮಾರು 10 ಲಕ್ಷ ರೂ.ವರೆಗೂ ಕರ್ನಾಟಕ ಮುಖ್ಯಮಂತ್ರಿಗೆ ವೇತನ ಮತ್ತು ಭತ್ಯೆ ಸಿಗುತ್ತದೆ. ಅದೇ ರೀತಿ ವಿಧಾನಸಭೆ ಸ್ಪೀಕರ್ ಹಾಗೂ ಪರಿಷತ್ ಸಭಾಪತಿಗಳಿಗೂ ಇದೇ ವೇತನ ಸಿಗಲಿದೆ. ಸಚಿವರು, ವಿಪಕ್ಷ ನಾಯಕರಿಗೆ ಮೂಲ ವೇತನ 60 ಸಾವಿರ ರೂ. ಇದ್ದು, ಉಳಿದೆಲ್ಲಾ ಭತ್ಯೆಗಳು ಮುಖ್ಯಮಂತ್ರಿಗಳಿಗೆ ಇದ್ದಂತೆಯೇ ಸಿಗಲಿದೆ. ಶಾಸಕರ ವೇತನ ಹೆಚ್ಚಾದರೆ ಇವರೆಲ್ಲರ ವೇತನವೂ ಹೆಚ್ಚಾಗಲಿದೆ.









