)
Youtuber Mukaleppa Love Case
: ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ, ಮತಾಂತರವೂ ಮಾಡಿಲ್ಲ. ನಾವಿಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂದು ಧಾರವಾಡದ ಯುಟ್ಯೂಬ್ ಕಾಮಿಡಿ ಸ್ಟಾರ್ ಖ್ಯಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಸ್ಪಷ್ಟನೆ ನೀಡಿದ್ದಾನೆ. ತನ್ನ ವಿರುದ್ಧ ಕೇಳಿಬಂದಿರುವ ಲವ್ ಜಿಹಾದ್ ಆರೋಪವನ್ನ ತಳ್ಳಿಹಾಕಿರುವ ಮುಕಳೆಪ್ಪ, ಪ್ರಕರಣ ದಾಖಲಾದ ಮೇಲೆ ಮೊದಲ ಬಾರಿಗೆ ಪತ್ನಿ ಸಮೇತ ಪ್ರತಿಕ್ರಿಯಿಸಿದ್ದಾನೆ. ಆತ ನೀಡಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಗಾಯತ್ರಿ ಜಾಲಿಹಾಳ ಎಂಬುವರನ್ನ ಮುಕಳೆಪ್ಪ ಮದುವೆಯಾಗಿದ್ದು ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಇದೀಗ ತನ್ನ ಪತ್ನಿ ಜೊತೆಗೆ ಮುಕಳೆಪ್ಪ ವಿಡಿಯೋ ಮಾಡಿ ಹೇಳಿಕೆ ನೀಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಮುಕಳೆಪ್ಪ ಲವ್ ಜಿಹಾದ್ ಮಾಡಿ ಮದುವೆಯಾಗಿದ್ದಾನೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನಾವು ಲವ್ ಮ್ಯಾರೇಜ್ ಆಗಿದ್ದೇವೆಯೇ ಹೊರತು ಲವ್ ಜಿಹಾದ್ ಮಾಡಿಲ್ಲ. ನಾನು ಯಾರನ್ನೂ ಮತಾಂತರ ಮಾಡಿಲ್ಲವೆಂದು ಸ್ಪಷ್ಟಿಕರಣ ನೀಡಿದ್ದಾನೆ.
ನಾನು ಯಾವುದೇ ರೀತಿಯ ಲವ್ ಜಿಹಾದ್ ಮಾಡಿಲ್ಲ. ಗಾಯತ್ರಿ ಯಾವ ಧರ್ಮದಲ್ಲಿ ಹುಟ್ಟಿದ್ದಾರೋ ಅದೇ ಧರ್ಮದಲ್ಲಿ ಮುಂದುವರೆಯುತ್ತಾರೆ. ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೋ ಅದೇ ಧರ್ಮದಲ್ಲಿ ಮುಂದುವರೆಯುತ್ತೇನೆ. ನಾನು ಯಾವುದೇ ಮತಾಂತರ ಮಾಡಿಲ್ಲ. ಕರ್ನಾಟಕದಲ್ಲಿ ಹುಟ್ಟಿದ್ದೇನೆಂದರೆ ನಾನೂ ಕೂಡ ಕನ್ನಡಿಗ. ನಾನೂ ಕೂಡ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕಲಾವಿದರ ಮಧ್ಯೆ ಯಾವುದೇ ರೀತಿಯ ಜಾತಿ ತರಬೇಡಿ. ನಮ್ಮನ್ನು ಬದುಕಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಇದೇ ವೇಳೆ ಮಾತನಾಡಿರುವ ಗಾಯತ್ರಿ, ʼಯಾರೂ ನಮ್ಮ ಮೈಂಡ್ ವಾಷ್ ಮಾಡಿಲ್ಲ. ಸ್ವತಃ ನಾವೇ ಗಂಡ-ಹೆಂಡತಿ ಕುಳಿತು ಹೇಳುತಿದ್ದೆವೆ, ನಾವಿಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ಮೂರು ವರ್ಷದಿಂದ ನಾವಿಬ್ಬರೂ ಪ್ರೀತಿಸಿದ್ದೇವೆ. ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನಗೆ ಮತಾಂತರ ಮಾಡಿದ್ದಾನೆ ಅನ್ನೋದು ಎಲ್ಲವೂ ಸುಳ್ಳುಸುದ್ದಿ. ಇದನ್ನ ಯಾರೂ ಸಹ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ನೀವು ಹೇಗೆ ನೋಡಿದ್ದಿರೋ ಅದೇ ರೀತಿ ನೋಡಿ. ನಮ್ಮ ಬಗ್ಗೆ ಸುಮ್ಮನೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮನ್ನ ನಮ್ಮ ಪಾಡಿಗೆ ಬದುಕಲು ಬಿಡಿ ಎಂದು ಕೈಮುಗಿದು ಬೇಡಿಕೊಂಡಿದ್ದಾಳೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಜಾತಿಗಣತಿಗೆ ಚಾಲನೆ ನೀಡಿದ್ದೇವೆ